ರಾಜ್ಯಾದ್ಯಂತ ಮೊದಲ ದಿನ 5.7 ಲಕ್ಷ ಸ್ತ್ರೀಯರಿಂದ ಉಚಿತ ಬಸ್ ಪ್ರಯಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ಸರ್ಕಾರದಿಂದ ಮೊದಲ ಗ್ಯಾರಂಟಿ ಯೋಜನೆಯಾದಂತ ಶಕ್ತಿ ಯೋಜನೆಗೆ ಭಾನುವಾರ ಚಾಲನೆ ನೀಡಲಾಗಿತ್ತು. ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಒದಗಿಸುವ ‘ಶಕ್ತಿ’ ಯೋಜನೆಗೆ ಎಲ್ಲೆಡೆ ಮಹಿಳೆಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಎರಡನೇ ದಿನವಾದ ಸೋಮವಾರವೂ ಬಹುತೇಕ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಸಂಖ್ಯೆ ಎಂದಿಗಿಂತ ಹೆಚ್ಚಾಗಿ ಕಂಡುಬಂದಿದೆ.

ಯೋಜನೆ ಜಾರಿಗೊಂಡ ಮೊದಲ ದಿನವಾದ ಭಾನುವಾರ ಮಧ್ಯಾಹ್ನ 1 ರಿಂದ ರಾತ್ರಿ 12 ಗಂಟೆವರೆಗೆ ರಾಜ್ಯಾದ್ಯಂತ ನಾಲ್ಕು ರಸ್ತೆ ಸಾರಿಗೆ ನಿಗಮಗಳ ವಾಹನಗಳಲ್ಲಿ 5.71 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಿದ್ದು, ಇವರ ಪ್ರಯಾಣದ ಮೌಲ್ಯ 1.40 ಕೋಟಿ ರೂ. ಗಳಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಈ ನಡುವೆ ರಾಜ್ಯದ ಹಲವೆಡೆ ಗುರುತಿನ ಪತ್ರ (ಐಡಿ ಪ್ರೂಫ್‌) ವಿಚಾರಕ್ಕೆ ಬಸ್‌ ನಿರ್ವಾಹಕರು ಮತ್ತು ಮಹಿಳಾ ಪ್ರಯಾಣಿಕರ ನಡುವೆ ಮಾತಿನ ಚಕಮಕಿ, ಗಲಾಟೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ, ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಾಗಿ ತೋರಿಸಬೇಕಾದ ದಾಖಲಾತಿಗಳನ್ನು ಮೂಲ ರೂಪ ಅಥವಾ ಡಿಜಿಲಾಕರ್‌ ಮುಖಾಂತರ ಹಾಜರುಪಡಿಸಬೇಕು ಎಂಬ ಆದೇಶವನ್ನು ತಿದ್ದುಪಡಿ ಮಾಡಿದೆ.

ಮಹಿಳೆಯರು ಪ್ರಯಾಣದ ಸಮಯದಲ್ಲಿ ಆಧಾರ್‌, ಮತದಾರರ ಗುರುತಿನ ಚೀಟಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಅವುಗಳ ಅಂಗಸಂಸ್ಥೆಗಳು ನೀಡಿರುವ ಗುರುತಿನ ಚೀಟಿಗಳ ಮೂಲ ಅಥವಾ ನಕಲು ಇಲ್ಲವೇ ಡಿಜಿಲಾಕರ್‌ (ಹಾರ್ಡ್‌ ಮತ್ತು ಸಾಫ್ಟ್‌ಕಾಪಿ) ಮಾದರಿಯಲ್ಲಿ ಹಾಜರುಪಡಿಸಬಹುದು ಎಂದು ಸಾರಿಗೆ ಇಲಾಖೆ ತಿಳಿಸಿ ಗೊಂದಲಗಳಿಗೆ ತೆರೆ ಎಳೆದಿದೆ.

ಉಚಿತ ಪ್ರಯಾಣ ಅಂಕಿ ಅಂಶ:

ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 12ರ ವರೆಗೆ ರಾಜ್ಯಾದ್ಯಂತ 5.71 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಈ ಪೈಕಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ 1,93,831 ಮಹಿಳಾ ಪ್ರಯಾಣಿಕರು ಸಂಚರಿಸಿದ್ದು ಅದರ ಮೌಲ್ಯ 58,16,178 ರು.ಗಳಾಗಿವೆ. ಬಿಎಂಟಿಸಿ ಬಸ್‌ನಲ್ಲಿ 2,01,215 ಮಹಿಳೆಯರು ಪ್ರಯಾಣಿಸಿದ್ದು, ಪ್ರಯಾಣದ ಮೌಲ್ಯ 26,19,604 ರು.ಗಳಾಗಿವೆ. ವಾಯವ್ಯ ಸಾರಿಗೆ ಬಸ್‌ಗಳಲ್ಲಿ 1,22,354 ಮಹಿಳೆಯರು ಪ್ರಯಾಣ ಮಾಡಿದ್ದು, ಪ್ರಯಾಣದ ಮೌಲ್ಯ 36,17,096 ರು.ಗಳಾಗಿವೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್‌ಗಳಲ್ಲಿ 53,623 ಮಹಿಳೆಯರು ಪ್ರಯಾಣಿಸಿದ್ದು ಒಟ್ಟು ಪ್ರಯಾಣದ ಮೌಲ್ಯ 19.70 ಲಕ್ಷ ರು.ಗಳಾಗಿವೆ. ಒಟ್ಟು 5,71,023 ಮಹಿಳೆಯರು ಪ್ರಯಾಣಿಸಿದ್ದು, ಪ್ರಯಾಣದ ಮೌಲ್ಯ 1,40,22,878 ರು.ಗಳೆಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!