ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ಕಾವೇರಿ ನೀರು: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳುನಾಡಿಗೆ (Tamil Nadu) ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸರ್ಕಾರಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸೂಚನೆ ನೀಡಿದ್ದು, ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸಭೆ ನಡೆಸಿ ಮುಂದಿನ 15 ದಿನಗಳವರೆಗೆ 5,000 ಕ್ಯೂಸೆಕ್ ನೀರು ಹರಿಸುವಂತೆ ಹೇಳಿದೆ. ಪ್ರತಿದಿನ 24 ಸಾವಿರ ಕ್ಯೂಸೆಕ್ ಹರಿಸುವಂತೆ ಅವರು ವಾದಿಸಿದ್ದರು. ನಾವು ಅಷ್ಟು ನೀರು ಹರಿಸಲು ಆಗುವುದಿಲ್ಲವೆಂದು ವಾದ ಮಂಡಿಸಿದ್ದು, ಹಾಗಾಗಿ ಪ್ರತಿದಿನ 5 ಸಾವಿರ ಕ್ಯೂಸೆಕ್ ಹರಿಸಲು ಸೂಚಿಸಲಾಗಿದೆ ಎಂದರು.

ಸಂಕಷ್ಟ ಸೂತ್ರದಂತೆ ಅಷ್ಟು ನೀರು ಹರಿಸಲು ಆಗಲ್ಲವೆಂದು ಮನವರಿಕೆ ಮಾಡುತ್ತೇವೆ. ನಮ್ಮ ಕಾನೂನು ಘಟಕದ ಜೊತೆ ಮಾತನಾಡುತ್ತೇನೆ. ಜಲಸಂಪನ್ಮೂಲ ಇಲಾಖೆ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ನಾಳೆ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸುತ್ತೇವೆ: ಡಿ.ಕೆ.ಶಿವಕುಮಾರ್​
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯಿಸಿದ್ದು, ನಾಳೆ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್‌ ನೀಡುವ ಆದೇಶದಂತೆ ಕ್ರಮ ಕೈಗೊಳ್ಳುತ್ತೇವೆ. ನಮ್ಮ ರೈತರ ಹಿತ ಮುಖ್ಯ, ವಿವಾದ ಬಗೆಹರಿಯುವುದು ಅಷ್ಟೇ ಮುಖ್ಯ. ನಾವು ಬಿಟ್ಟ ನೀರು ಬಿಳಿಗುಂಡ್ಲು ಮಾಪನ ಕೇಂದ್ರ ತಲುಪಲು 5 ದಿನ ಬೇಕು. ಬೀಗ ಅವರ ಕೈಯಲ್ಲಿದೆ, ಎಷ್ಟು ನೀರು ಬಿಡುತ್ತಾರೆ ಎಂಬುದರಲ್ಲಿ ಗೊಂದಲವಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!