ರಾಯಚೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ 57ನೇ ಅಂತಾರಾಷ್ಟ್ರೀಯ ಕೃಷಿ ಇಂಜಿನಿಯರ್ ಸಮ್ಮೇಳನ

ಹೊಸ ದಿಗಂತ ವರದಿ, ರಾಯಚೂರು:

ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವುದಕ್ಕೆ, ಆಯಾ ಪ್ರದೇಶದ ನೆಲ, ಜಲಕ್ಕೆ ಅನುಗುಣಕ್ಕೆ ತಕ್ಕಂತೆ ಕೃಷಿಯಲ್ಲಿ ಸಂಶೋಧನೆಗಳು ಇಂದಿನ ಅತ್ಯಗತ್ಯವಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಸೋಮವಾರ ನಗರದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಜರುಗಿದ 57ನೇ ಅಂತರಾಷ್ಟ್ರೀಯ ಕೃಷಿ ಇಂಜಿನೀಯರ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕೃಷಿಯಲ್ಲಿ ರೈತರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕಡಿಮೆ ನೀರು ಮತ್ತು ಸಮಯದಲ್ಲಿ ಗುಣಮಟ್ಟದ ಅಧಿಕ ಇಳುವರಿಯನ್ನು ಪಡೆದುಕೊಳ್ಳುವಂತಹ ಆಧುನಿಕ ಸಂಶೋಧನೆಗಳನ್ನು ಮಾಡುವುದಕ್ಕೆ ರಾಜ್ಯ ನಾಲ್ಕೂ ಕೃಷಿ ಸಂಶೋಧನಾ ಕೇಂದ್ರಗಳ ಸಂಶೋಧಕರು ಶ್ರಮಿಸುವುದು ಬಹಳ ಅಗತ್ಯವಾಗಿದೆ. ಇದಕ್ಕೆ ಬೇಕಾರ ಎಲ್ಲ ಸಹಕಾರವನ್ನು ಸರ್ಕಾರ ಮಾಡಲಿದೆ ಎಂದರು.

ರಾಜ್ಯ ಮತ್ತು ದೇಶ ಮೇಲಿಂದ ಮೇಲೆೆ ಪ್ರಾಕೃತಿಕ ವೈಪರಿತ್ಯಗಳನ್ನು ಕಾಣಲಾಗುತ್ತಿದೆ. ಬರುವ ದಿನಗಳಲ್ಲಿ ಯಾವ ಸಮಯದಲ್ಲಿ ಎಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದು ತಿಳಿಯದಾಗಿದೆ. ಇವುಗಳನ್ನು ಸಮರ್ಥವಾಗಿ ಎದುರಿಸುವುದಕ್ಕೆ ಕೃಷಿ ವಿವಿಗಳ ಸಂಶೋಧಕರ ಪಾತ್ರ ಬಹಳ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಶೋಧಕರ ಪಾತ್ರ ಹಿಂದಿಗಿಂತ ಇಂದು ಹೆಚ್ಚಿನ ಪ್ರಸ್ತುತವೆನಿಸುತ್ತದೆ ಎಂದು ತಿಳಿಸಿದರು.

ಇಲ್ಲಿಯವರೆಗೆ ಮಾಡಿದ ಸಂಶೋಧನೆಗಳು ಒಂದಾದರೆ ಪ್ರಸ್ತುತ ದೇಶದ ಜನಸಂಖ್ಯೆಗೆ ಆಹಾರವನ್ನು ಒದಗಿಸುವುದಕ್ಕೆ ಬೇಕಾದ ಪೂರಕ ಸಂಶೋಧನೆಗಳತ್ತ ಸಂಶೋದಕರ ಗಮನಕೊಡಬೇಕಾಗಿದೆ. ಕಠಿಣ ಬರಗಾಲ ಮತ್ತು ಪ್ರಕೃತಿ ವೈಫಲ್ಯದಂತಹ ಸ್ಥಿತಿಯಲ್ಲಿ ಜನತೆಗೆ ಅಹಾರದ ಕೊರತೆ ಆಗದಂತಹ ಆಹಾರ ಧಾನ್ಯಗಳ ಉತ್ಪಾದನೆಗಳತ್ತ ನಾವಿಂದು ಗಮನವನ್ನು ಕೊಡಬೇಕಾಗಿದೆ ಎಂದು ಹೇಳಿದರು.

ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಈ ಕಾರ್ಯಕ್ರಮದಲ್ಲಿ ರೈತ ಕೂಲಿಕಾರ್ಮಿಕರಿಗೆ ಪೂರಕವಾಗುವಂತಹ ಚರ್ಚೆಗಳಾಗಲಿ, ಕೃಷಿಯಲ್ಲಿ ಡಿಪ್ಲೋಮಾ ಮತ್ತು ಇಂಜನೀಯರಿಂಗ್ ಪದವಿ ಪಡೆದವರಿಗೆ ಉದ್ಯೋಗ ದೊರೆಯುತ್ತಿಲ್ಲ. ಈ ಸಮಸ್ಯೆ ನಿವಾರಣೆಗೆ ಉದ್ಯೋಗ ನೀಡುವುವದಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ಕೃಷಿ ಇಲಾಖೆಯಿಂದ ಮಾಡುವುದಕ್ಕೆ ಕ್ರಮಗಳನ್ನು ಕೈಗೊಳ್ಳುವಂತೆ ಕೃಷಿ ಸಚಿವರಲ್ಲಿ ಮನವಿ ಮಾಡಿಕೊಂಡರು.

ವೇದಿಕೆಯಲ್ಲಿ ಶಾಸಕ ಹಂಪಯ್ಯ ನಾಯಕ್, ಕೃಷಿ ವಿವಿ ಕುಲಪತಿ ಡಾ. ಎಂ.ಹನುಮಂತಪ್ಪ, ಡಾ. ಎಸ್.ಎನ್.ಝಾ, ಡಾ. ಪಿ.ಕೆ.ಸಾಹೂ, ಡಾ. ಎಂ.ನಿಮಿಚಂದ್ರಪ್ಪಾ, ಡಾ. ಉದಯಕುಮಾರ ನಿದೋನಿ, ಮಲ್ಲಿಕಾರ್ಜುನ.ಡಿ., ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಎಲ್., ಜಿ.ಪಂ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!