ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲೋನಿಯಲ್ಲಿರುವ ‘ನ್ಯೂ ಬ್ಲಾಸಮ್’ ಖಾಸಗಿ ಶಾಲೆಯಲ್ಲಿ ತರಗತಿ ಕೊಠಡಿಯಲ್ಲೇ 5ನೇ ತರಗತಿ ವಿದ್ಯಾರ್ಥಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಬಾಲಕನನ್ನು ಅರ್ಹಾನ್ ಪಾಷಾ (12) ಎಂದು ಗುರುತಿಸಲಾಗಿದ್ದು, ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಬೇಜವಾಬ್ದಾರಿತನವೇ ಮಗನ ಸಾವಿಗೆ ಕಾರಣ ಎಂದು ಆರೋಪಿಸಿ ಪೋಷಕರು ಮತ್ತು ಸಂಬಂಧಿಕರು ಶಾಲೆಯ ಮುಂದೆ ವ್ಯಾಪಕ ಪ್ರತಿಭಟನೆ ನಡೆಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ;
ವಿದ್ಯಾರ್ಥಿ ಅರ್ಹಾನ್ ಪಾಷಾ ಕ್ಲಾಸ್‌ರೂಮ್‌ನಲ್ಲಿ ಇದ್ದಕ್ಕಿದ್ದಂತೆ ಕುಸಿದು ಬೀಳುವ ಭೀಕರ ದೃಶ್ಯಗಳು ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ದುರ್ಘಟನೆಯು ಕಳೆದ ಜೂನ್ 10 ರಂದೇ ಸಂಭವಿಸಿದ್ದು, ಶಾಲಾ ಮಂಡಳಿಯು ವಿಷಯವನ್ನು ಮುಚ್ಚಿಡಲು ಯತ್ನಿಸಿದೆ ಎಂದು ಕುಟುಂಬಸ್ಥರು ದೂರಿದ್ದಾರೆ. ಇದೀಗ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬರುತ್ತಿದ್ದಂತೆ ಪೋಷಕರ ಆಕ್ರೋಶ ಕಟ್ಟೆಯೊಡೆದಿದೆ.
ಇದನ್ನೂ ಓದಿ:
ಶಾಲಾ ಸಿಬ್ಬಂದಿ ವಿರುದ್ಧ ಪೋಷಕರ ಗಂಭೀರ ಆರೋಪ
ಮಗು ತರಗತಿಯಲ್ಲಿ ಕುಸಿದು ಬಿದ್ದ ತಕ್ಷಣವೇ ಶಾಲಾ ಸಿಬ್ಬಂದಿ ಸೂಕ್ತ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಸಕಾಲದಲ್ಲಿ ವೈದ್ಯಕೀಯ ನೆರವು ಸಿಗದ ಕಾರಣಕ್ಕಾಗಿಯೇ ಮಗನ ಜೀವ ಹೋಗಿದೆ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಶಾಲೆಯ ಬೇಜವಾಬ್ದಾರಿತನದ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಮತ್ತು ತಮ್ಮ ಮಗನ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಶಾಲೆಯ ಗೇಟ್ ಎದುರು ಪ್ರತಿಭಟನೆ ನಡೆಸಿದ್ದಾರೆ.



