ರಾಜ್ಯದಲ್ಲಿ 6 ಕೋಟಿ ಕೋವಿಡ್ ಪರೀಕ್ಷೆ, ಕರ್ನಾಟಕಕ್ಕೆ 3ನೇ ಸ್ಥಾನ: ಸಚಿವ ಡಾ.ಕೆ.ಸುಧಾಕರ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕೋವಿಡ್ ಪರೀಕ್ಷೆ ವ್ಯವಸ್ಥೆಯನ್ನು ಆರಂಭದಿಂದಲೂ ಸಮರ್ಥವಾಗಿ ಅನುಷ್ಠಾನ ಮಾಡಿದ್ದ ಕರ್ನಾಟಕ, ಇಂದಿಗೆ 6 ಕೋಟಿ ಪರೀಕ್ಷೆಯ ಮೈಲಿಗಲ್ಲು ತಲುಪಿದೆ. ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಇದು ದೊಡ್ಡ ಯಶಸ್ಸು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.

ಕೋವಿಡ್ ಆರಂಭವಾದಾಗ ರಾಜ್ಯದಲ್ಲಿ ಎನ್‍ಐವಿ ಘಟಕದಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಆಗ ಖಚಿತತೆಗಾಗಿ ಪುಣೆಯ ಎನ್‍ಐವಿ ಘಟಕಕ್ಕೆ ಮಾದರಿಗಳನ್ನು ಕಳುಹಿಸಲಾಗುತ್ತಿತ್ತು. ನಂತರ ಹಂತಹಂತವಾಗಿ ಹೊಸ ಸರಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳನ್ನು ಆರಂಭಿಸಲಾಯಿತು. ಸದ್ಯ ರಾಜ್ಯದಲ್ಲಿ, 99 ಸರಕಾರಿ ಹಾಗೂ 169 ಖಾಸಗಿ ಸೇರಿ ಒಟ್ಟು 268 ಲ್ಯಾಬ್ ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಈವರೆಗೆ 1,14,12,162 ರ್ಯಾಪಿಡ್ ಆಂಟಿಜೆನ್, 4,87,02,653 ಆರ್ ಟಿಪಿಸಿಆರ್ ಹಾಗೂ ಇತರೆ ವಿಧಾನಗಳು ಸೇರಿ ಒಟ್ಟು 6,01,14,815 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. 2020ರಲ್ಲಿ ಒಟ್ಟು 1,41,96,065 ಪರೀಕ್ಷೆ, 2021 ರಲ್ಲಿ 4,23,91,357 ಹಾಗೂ 2022 ರಲ್ಲಿ ಈವರೆಗೆ 35,27,393 ಪರೀಕ್ಷೆಗಳನ್ನು ನಡೆಸಲಾಗಿದೆ.

ಕೋವಿಡ್ ಸಾಂಕ್ರಾಮಿಕವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಉತ್ತಮ ಪರೀಕ್ಷಾ ವ್ಯವಸ್ಥೆ ಕೂಡ ಕಾರಣ. ಆರಂಭದಿಂದಲೂ ಕರ್ನಾಟಕ ಪರೀಕ್ಷಾ ವ್ಯವಸ್ಥೆಯಲ್ಲಿ ಮುಂದಿದ್ದು, ಉತ್ತಮ ಪರೀಕ್ಷೆ ಹಾಗೂ ಟ್ರ್ಯಾಕಿಂಗ್ ವಿಧಾನ ಅಳವಡಿಸಿಕೊಂಡಿದೆ. ಈಗ 6 ಕೋಟಿ ಪರೀಕ್ಷೆಗಳ ಮೂಲಕ ಕೋವಿಡ್ ಹೋರಾಟದಲ್ಲಿ ಮುಂಚೂಣಿಯಲ್ಲಿದೆ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ. ಹೆಚ್ಚು ಕೋವಿಡ್ ಪರೀಕ್ಷೆ ನಡೆಸಿದ ರಾಜ್ಯಗಳಲ್ಲಿ ರಾಜ್ಯವು ಇಡೀ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಇದನ್ನು ಸಾಧ್ಯವಾಗಿಸಿದ ಎಲ್ಲಾ ಜಿಲ್ಲಾಡಳಿತ ಹಾಗೂ ಆರೋಗ್ಯ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಚಿವ ಡಾ. ಸುಧಾಕರ್ ತಿಳಿಸಿದರು.

ಸಾಮರ್ಥ್ಯ ಹೆಚ್ಚಳ:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಆರಂಭದಿಂದಲೇ 5 ಟಿ ವಿಧಾನ (ಟೆಸ್ಟ್, ಟ್ರ್ಯಾಕ್, ಟ್ರೇಸಿಂಗ್, ಟ್ರಯಾಜಿಂಗ್, ಟೆಕ್ನಾಲಜಿ) ಅನುಸರಿಸಿದ್ದವು. 20,000 ಜನಸಂಖ್ಯೆಗೆ ಅನುಗುಣವಾಗಿ, ಒಟ್ಟು 3,678 (ಸರಕಾರಿ 3,102, ಖಾಸಗಿ 666) ಮಾದರಿ ಸಂಗ್ರಹ ಕೇಂದ್ರಗಳನ್ನು ಆರಂಭಿಸಲಾಯಿತು. ಜೊತೆಗೆ ಸರಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜು, ಖಾಸಗಿ ಆಸ್ಪತ್ರೆ, ಲ್ಯಾಬ್ ಗಳಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಆರಂಭಿಸಲಾಯಿತು. ಒಟ್ಟು 63 ವೈದ್ಯಕೀಯ ಕಾಲೇಜುಗಳಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಆರಂಭವಾದವು. ಆರಂಭದಲ್ಲಿ 10-12 ಸರಕಾರಿ ಪ್ರಯೋಗಾಲಯಗಳಲ್ಲಿ ಮಾತ್ರ ಆರ್ಟಿಪಿಸಿಆರ್ ಪರೀಕ್ಷಾ ವ್ಯವಸ್ಥೆ ಇದ್ದು, ಈಗ ಆ ಸಂಖ್ಯೆ 57 ಕ್ಕೇರಿದೆ. 108 ಆರ್ ಎನ್‍ಎ ಎಕ್ಸ್ ಟ್ರ್ಯಾಕ್ಟರ್, 139 ಆರ್ಟಿಪಿಸಿಆರ್ ಯಂತ್ರ ಹಾಗೂ ಒಂದು ಪೂರ್ಣ ಪ್ರಮಾಣದ ಯಂತ್ರದ ಮೂಲಕ ದಿನದ ಪರೀಕ್ಷಾ ಸಾಮರ್ಥ್ಯವನ್ನು 1,20,800 ಕ್ಕೆ ಏರಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದರು.

ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ವೈರಾಣು ಪ್ರಕರಣ ಪತ್ತೆಯಾದ ಬಳಿಕ, ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಲ್ಲಿ ಶೇ.2 ರಷ್ಟು ಪರೀಕ್ಷೆಗೊಳಪಡಿಸುವ ಕ್ರಮ ಜಾರಿ ಮಾಡಲಾಯಿತು. ನಂತರ ಡಿಸೆಂಬರ್ ನಿಂದ ಪರೀಕ್ಷಾ ಗುರಿಯನ್ನು 80,000 ದಿಂದ 1 ಲಕ್ಷಕ್ಕೆ ಹೆಚ್ಚಿಸಲಾಯಿತು ಎಂದು ಸಚಿವರು ವಿವರಿಸಿದರು.

ಮಕ್ಕಳ ಪರೀಕ್ಷೆ:
ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಅಭಿಪ್ರಾಯದ ಹಿನ್ನೆಲೆಯಲ್ಲಿ, ಒಟ್ಟು ಪರೀಕ್ಷೆಯಲ್ಲಿ ಕಡ್ಡಾಯವಾಗಿ ಶೇ. 2 ರಷ್ಟು ಪರೀಕ್ಷೆಯನ್ನು ಮಕ್ಕಳಿಗೆ ನಡೆಸುವ ಕ್ರಮ ತರಲಾಗಿದೆ. ಡಿಸೆಂಬರ್ 1ರಿಂದ ಜನವರಿ 20ರ ಅವಧಿಯಲ್ಲಿ ನಡೆಸಲಾದ ಒಟ್ಟು ಪರೀಕ್ಷೆಯಲ್ಲಿ ಶೇ. 29ರಷ್ಟು ಮಕ್ಕಳಿಗೆ ಮಾಡಿದ ಪರೀಕ್ಷೆಗಳಾಗಿವೆ. ಜೊತೆಗೆ, 15 ದಿನಕ್ಕೊಮ್ಮೆ ಕಾಲೇಜು, ಪ್ರೌಢಶಾಲೆ, ಹೋಟೆಲ್, ರೆಸ್ಟೋರೆಂಟ್, ಅಡುಗೆ ಸಿಬ್ಬಂದಿ ಮೊದಲಾದವರಿಗೆ ರ್ಯಾಂಡಮ್ ಪರೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!