ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಲೆಮರೆಸಿಕೊಂಡಿದ್ದ 6 ನಕ್ಸಲರು ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬರಲು ಸಿದ್ಧರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ 6 ಮೋಸ್ಟ್ ವಾಂಟೆಂಡ್ ನಕ್ಸಲರು ಇಂದು ಸಂಜೆ 6 ಗಂಟೆಗೆ ಸಿಎಂ ಸಿದ್ಧರಾಮಯ್ಯ ಸಮ್ಮುಖದಲ್ಲಿ ಶರಣಾಗತಿಯಾಗಲಿದ್ದಾರೆ.
ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಕಚೇರಿಯಿಂದ ಮಾಹಿತಿ ನೀಡಲಾಗಿದ್ದು, ಇಂದು ಸಂಜೆ 6 ಗಂಟೆಗೆ ಗೃಹ ಕಚೇರಿ ಕೃಷ್ಣದಲ್ಲಿ ನಕ್ಸಲರು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶರಣಾಗತಿ ಆಗಲಿದ್ದಾರೆ ಎಂದು ತಿಳಿಸಿದೆ.
ಆರು ನಕ್ಸಲರಾದ ಶೃಂಗೇರಿ ತಾಲೂಕಿನ ಮುಂಡುಗಾರು ಗ್ರಾಮದ ಲತಾ, ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆ ಕುಂತಲೂರು ಮೂಲಕದ ಸುಂದರಿ, ರಾಯಚೂರು ಮೂಲದ ಮಾರಪ್ಪ ಅರೋಳಿ, ವಸಂತ, ಎನ್.ಜೀಶಾ ಶರಣಾಗತಿಗೆ ನಿರ್ಧರಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲು ನಿರ್ಧರಿಸಿದ್ದ ನಕ್ಸಲರನ್ನು ಈಗಾಗಲೇ ಕಾಡಿನಿಂದ ನಾಡಿಗೆ ಕರೆದುಕೊಂಡು ಬರಲಾಗಿದೆ. ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರ ಜೊತೆ ನಕ್ಸಲರು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸುತ್ತಿದ್ದರು. ಆದರೆ ಇವರು ಇದೀಗ ಸಿಎಂ ಸಿದ್ದರಾಮಯ್ಯರ ಮುಂದೆ ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ನಿರ್ಧರಿಸಿದ್ದಾರೆ. ಅದಕ್ಕೆ ಸಿಎಂ ಕೂಡ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ನಾನೇ ನಡೆಸಿಕೊಡ್ತೇನೆ, ಬನ್ನಿ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಸಿಎಂ ಎದುರು ಶರಣಾಗಲು ನಕ್ಸಲರು ಬೆಂಗಳೂರಿನತ್ತ ಹೊರಟಿದ್ದಾರೆ.
ನಕ್ಸಲರಿಗೆ ವಿಶೇಷ ಪ್ಯಾಕೇಜ್ ಘೋಷಣೆ
ರಾಜ್ಯ ಸರ್ಕಾರದಿಂದ ಶರಣಾಗುತ್ತಿರುವಂತ ನಕ್ಸಲರಿಗೆ ಪ್ಯಾಕೇಜ್ ಘೋಷಣೆ ಮಾಡಿದೆ. ಮೂರು ಕೆಟಗರಿಯಲ್ಲಿ ಪ್ಯಾಕೇಜ್ ನೀಡಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.
ಕೆಟಗರಿ ಎ ವರ್ಗದಡಿ ನಮ್ಮ ರಾಜ್ಯದವರೇ ಆಗಿದ್ದು, ನಕ್ಸಲ್ ಚಟುವಟಿಕೆಯಲ್ಲಿ ತೊಡಗಿ, ಕೇಸ್ ಇದ್ದು ಶರಣಾಗುತ್ತಿರುವವರಿಗೆ 7.50 ಲಕ್ಷ ಹಣ ನೀಡುತ್ತಿದೆ.
ಕೆಟಗರಿ ಬಿ ವರ್ಗದಡಿ ಹೊರ ರಾಜ್ಯದ ನಕ್ಸಲರಿಗೆ ಶಸ್ತ್ರಸಜ್ಜಿತ ನಕ್ಸಲ್ ಗುಂಪಿನ ಸದಸ್ಯನಾಗಿದ್ದು, ಒಂದಕ್ಕಿಂತ ಹೆಚ್ಚು ಸದಸ್ಯರಾಗಿದ್ದರೇ 4 ಲಕ್ಷ ಪ್ಯಾಕೇಜ್ ನೀಡುವುದಾಗಿ ತಿಳಿಸಿದೆ.
ಕೆಟಗರಿ ಸಿ ವರ್ಗದಡಿ ನಕ್ಸಲ್ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದು, ಪ್ರಕರಣಗಳು ಇದ್ದರೂ 2 ಲಕ್ಷ ಹಣವನ್ನು ಪ್ಯಾಕೇಜ್ ನಡಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.