ಮುಂದಿನ ಒಂದು ವರ್ಷದಲ್ಲಿ ಉಚಿತ ಚಿಕಿತ್ಸೆಗೆ 65 ಕೋಟಿ ರೂ. ಮೀಸಲು: ಅಮೃತ ಆಸ್ಪತ್ರೆ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಕೊಚ್ಚಿಯ ಅಮೃತ ಆಸ್ಪತ್ರೆಯು ಮುಂದಿನ ಒಂದು ವರ್ಷದಲ್ಲಿಉಚಿತ ಚಿಕಿತ್ಸೆಗೆಂದೇ 65 ಕೋಟಿ ರೂ. ಮೀಸಲಿಟ್ಟಿರುವುದಾಗಿ ಘೋಷಿಸಿದೆ.

ಇಂದು ಕೊಚ್ಚಿಯಲ್ಲಿ ಆಯೋಜಿಸಿದ್ದ ರಜತ ಮಹೋತ್ಸವ ಸಂಭ್ರಮದಲ್ಲಿ ಈ ಘೋಷಣೆಯನ್ನು ಆಸ್ಪತ್ರೆ ಮಾಡಿದೆ.

ಈ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ , ಬಡವರ ಸೇವೆ ಮತ್ತು ಜನಸಾಮಾನ್ಯರ ಆಧ್ಯಾತ್ಮಿಕ ಉನ್ನತಿಗಾಗಿ ಮಾತಾ ಅಮೃತಾನಂದಮಯಿ ಅವರ ಕೊಡುಗೆಯನ್ನು ಉಲ್ಲೇಖಿಸಿದರು.

ನಾನು ಅಮ್ಮನನ್ನು ಭೇಟಿಯಾದಾಗಲೆಲ್ಲ ಹೊಸ ಶಕ್ತಿ, ಪ್ರಜ್ಞೆ ಮತ್ತು ಚೈತನ್ಯದಿಂದ ಹಿಂದಿರುಗುತ್ತೇನೆ . ಗುಜರಾತ್​ನಲ್ಲಿ 2001ರ ಭೂಕಂಪದ ಬಳಿಕ ಅಮ್ಮ ಅವರ ಆಶ್ರಮವು 1200 ಮನೆಗಳನ್ನು ನಿರ್ಮಿಸಿತು. ಆ ಗ್ರಾಮಗಳನ್ನು ಸ್ಥಳೀಯವಾಗಿ ಅಮ್ಮನ ಹಳ್ಳಿಗಳು ಎಂದು ಕರೆಯಲಾಗುತ್ತದೆ. ಅಗತ್ಯದ ಸಮಯದಲ್ಲಿ ಅವರು ನೀಡಿದ ಸಹಾಯಕ್ಕಾಗಿ ಜನರು ಕೃತಜ್ಞತೆ ತೋರುತ್ತಿದ್ದಾರೆ ಎಂದೂ ಶಾ ಹೇಳಿದರು.

ಕಳೆದ 9 ವರ್ಷಗಳಲ್ಲಿ ವೈದ್ಯಕೀಯ ಶಿಕ್ಷಣ ಮೂಲಸೌಕರ್ಯ ಗಣನೀಯವಾಗಿ ಸುಧಾರಿಸಿದೆ. 2013-14ರಲ್ಲಿ ಭಾರತದಲ್ಲಿ 387 ವೈದ್ಯಕೀಯ ಕಾಲೇಜುಗಳಿದ್ದವು. ಇದೇ ಅವಧಿಯಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ 51,000ದಿಂದ 99,000ಕ್ಕೆ ಮತ್ತು ಪಿಜಿ ಸೀಟುಗಳ ಸಂಖ್ಯೆ 31,000ದಿಂದ 64,000ಕ್ಕೆ ಏರಿದೆ. ಅಲ್ಲದೆ, ದೇಶಾದ್ಯಂತ 22 ಹೊಸ ಏಮ್ಸ್​​ಗಳನ್ನು ತೆರೆಯಲಾಗಿದೆ. ಕರೊನಾ ಸಾಂಕ್ರಾಮಿಕ ಸಮಯದಲ್ಲಿ ಕೇಂದ್ರ ಸರ್ಕಾರವು 130 ಕೋಟಿ ಭಾರತೀಯರಿಗೆ ಸ್ವದೇಶಿ ಲಸಿಕೆ ನೀಡಿದ್ದನ್ನು ಜಗತ್ತು ವಿಸ್ಮಯದಿಂದ ನೋಡಿದೆ ಎಂದು ಹೇಳಿದರು.

ಅಮೃತ ವಿಶ್ವವಿದ್ಯಾಪೀಠಂನ ಅಮೃತಪುರಿ (ಕೊಲ್ಲಂ) ಕ್ಯಾಂಪಸ್​ನಲ್ಲಿನ ಅತ್ಯಾಧುನಿಕ ಸಂಶೋಧನಾ ಕೇಂದ್ರ ಮತ್ತು ಕೊಚ್ಚಿಯ ಅಮೃತ ಆಸ್ಪತ್ರೆಯ ಪಕ್ಕದಲ್ಲಿರುವ ಮತ್ತೊಂದು ಸಂಶೋಧನಾ ಸೌಲಭ್ಯವನ್ನು ಅಮಿತ್ ಶಾ ಆನ್​ಲೈನ್​ ಮೂಲಕ ಉದ್ಘಾಟಿಸಿದರು.

ಕೊಚ್ಚಿಯ ಅಮೃತ ಆಸ್ಪತ್ರೆಯನ್ನು 1998ರ ಮೇ 17ರಂದು ಅಟಲ್ ಬಿಹಾರಿ ವಾಜಪೇಯಿ ಅವರು ಉದ್ಘಾಟಿಸಿದ್ದರು. ಅಂದು 125 ಹಾಸಿಗೆಗಳಿಂದ ಪ್ರಾರಂಭವಾದ ಅಮೃತ ಆಸ್ಪತ್ರೆ ಈಗ 1350 ಹಾಸಿಗೆಗಳ ಅತ್ಯಂತ ಸುಸಜ್ಜಿತ, ಅತ್ಯಾಧುನಿಕ ಸೌಲಭ್ಯದ ಆಸ್ಪತ್ರೆಯಾಗಿ ಮಾರ್ಪಟ್ಟಿದೆ. ಭಾರತದಲ್ಲೇ ಮೊದಲ ಬಾರಿಗೆ ಹ್ಯಾಂಡ್​ ಟ್ರಾನ್ಸ್​​​ಪ್ಲಾಂಟೇಷನ್​​, ಮೈಕ್ರೋ ಬ್ಲಡ್ ಸ್ಟೆಮ್​ಸೆಲ್ ಟ್ರಾನ್ಸ್​ಪ್ಲಾಂಟೇಷನ್ ನಡೆಸಿರುವ ಖ್ಯಾತಿಗೆ ಒಳಗಾಗಿರುವ ಈ ಆಸ್ಪತ್ರೆ, ಅತ್ಯಧಿಕ ರೋಬೋಟಿಕ್ ಪಿತ್ತಜನಕಾಂಗ ಕಸಿ ಮಾಡಿದ ಭಾರತದ ಮೊದಲ ಆಸ್ಪತ್ರೆ ಮತ್ತು ಭಾರತದ ಮೊದಲ 3ಡಿ ಪ್ರಿಂಟಿಂಗ್ ಲ್ಯಾಬ್ ಹೊಂದಿದ ಮೊದಲ ಆಸ್ಪತ್ರೆ ಎಂಬ ಪ್ರಸಿದ್ಧಿಯನ್ನೂ ಪಡೆದಿದೆ.

ಕೊಚ್ಚಿಯ 1,350 ಹಾಸಿಗೆಗಳ ಅಮೃತ ಆಸ್ಪತ್ರೆಯು ತನ್ನ ರಜತ ಮಹೋತ್ಸವ ಆಚರಣೆಯ ಭಾಗವಾಗಿ ಮುಂದಿನ ಒಂದು ವರ್ಷದಲ್ಲಿ 65 ಕೋಟಿ ರೂ. ದತ್ತಿ ಆರೈಕೆಯ ಬದ್ಧತೆಯನ್ನು ಘೋಷಣೆ ಮಾಡಿದೆ. ಈಗಾಗಲೇ ಪ್ರತಿವರ್ಷ ಉಚಿತ ಚಿಕಿತ್ಸೆಗಾಗಿ 40 ಕೋಟಿ ರೂ. ಖರ್ಚು ಮಾಡುತ್ತಿರುವ ಅಮೃತ ಆಸ್ಪತ್ರೆ, 25 ವರ್ಷಗಳು ಪೂರ್ಣಗೊಂಡ ಈ ಸಂದರ್ಭದಲ್ಲಿ ಉಚಿತ ಚಿಕಿತ್ಸೆಗೆಂದು ಹೆಚ್ಚುವರಿಯಾಗಿ 25 ಕೋಟಿ ರೂ. ಮೀಸಲಿರಿಸಿದೆ.

ಮಕ್ಕಳ ಹೃದ್ರೋಗ, ಮೂತ್ರಪಿಂಡ ಕಸಿ, ಮೊಣಕಾಲು ಬದಲಿ, ಅಸ್ಥಿಮಜ್ಜೆ ಕಸಿ, ಮಕ್ಕಳ ಪಿತ್ತಜನಕಾಂಗ ಕಸಿ ಮತ್ತು ಉಚಿತ ನಾರಿನ ಸ್ಕ್ಯಾನ್ ಸೇರಿದಂತೆ ಹಲವಾರು ವೈದ್ಯಕೀಯ ಸೇವೆಗಳನ್ನು ಈ ಖರ್ಚಿನಲ್ಲಿ ನೀಡಲಾಗುವುದು. ಅಲ್ಲದೆ ಅಮೃತ ಆಸ್ಪತ್ರೆಯು ಮುಂದಿನ ಒಂದು ವರ್ಷದಲ್ಲಿ ತಿಂಗಳಿಗೆ 240 ಹೆರಿಗೆಗಳನ್ನು ಕೂಡ ಉಚಿತವಾಗಿ ನಡೆಸಲಿದೆ ಎಂದು ಆಸ್ಪತ್ರೆ ಘೋಷಿಸಿದೆ.

1998ರಲ್ಲಿ ಸ್ಥಾಪನೆ ಆದಾಗಿನಿಂದ ಅಮೃತ ಆಸ್ಪತ್ರೆಯು ಜನರಿಗೆ ಉಚಿತ ವೈದ್ಯಕೀಯ ಆರೈಕೆ ಒದಗಿಸಲು 816 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಿದೆ. ಆಸ್ಪತ್ರೆಯಲ್ಲಿ ಈವರೆಗೆ ಚಿಕಿತ್ಸೆ ಪಡೆದ 1.96 ಕೋಟಿ ರೋಗಿಗಳಲ್ಲಿ, 59 ಲಕ್ಷ ರೋಗಿಗಳಿಗೆ ಉಚಿತ ಅಥವಾ ಸಬ್ಸಿಡಿ ಚಿಕಿತ್ಸೆ ನೀಡಲಾಗಿದೆ ಎಂದೂ ತಿಳಿಸಿದೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!