ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನವರಿಯಿಂದ ಈವರೆಗೆ 682 ಭಾರತೀಯರನ್ನು ಅಮೆರಿಕದಿಂದ ಗಡೀಪಾರು ಮಾಡಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.
ಈ ಕುರಿತಂತೆ ಲೋಕಸಭೆಗೆ ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, ಗಡೀಪಾರಾದ ಭಾರತೀಯರ ಪೈಕಿ ಬಹುತೇಕರು ಅಕ್ರಮವಾಗಿ ಅಮೆರಿಕ ಪ್ರವೇಶಕ್ಕೆ ಪ್ರಯತ್ನಿಸಿದವರೇ ಆಗಿದ್ದಾರೆ ಎಂದು ಹೇಳಿದ್ದಾರೆ.
ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿರುವುದು, ಅಥವಾ ವೀಸಾ ಮಾನ್ಯತೆಯ ಅವಧಿ ಮೀರಿ ಉಳಿದಿರುವುದು, ಯಾವುದೇ ದಾಖಲೆಗಳಿಲ್ಲದೆ ಅಮೆರಿಕದಲ್ಲಿ ವಾಸಿಸುತ್ತಿರುವುದು ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾದ ವ್ಯಕ್ತಿಗಳನ್ನು ಗಡೀಪಾರು ಮಾಡುವ ಎಲ್ಲ ಸಂದರ್ಭಗಳಲ್ಲಿ ಭಾರತ ಸರ್ಕಾರವು ಅಮೆರಿಕ ಸರ್ಕಾರದೊಂದಿಗೆ ನಿಕಟ ಸಮನ್ವಯದಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದೆ ಎಂದು ಹೇಳಿದ್ದಾರೆ.
ಅಮೆರಿಕ ಕಡೆಯಿಂದ ಗಡೀಪಾರು ಮಾಡಲು ಗುರುತಿಸಲಾದ ವ್ಯಕ್ತಿಗಳ ಪಟ್ಟಿಯನ್ನು ಭಾರತ ಸರ್ಕಾರದ ಸಂಬಂಧಿತ ಸಂಸ್ಥೆಗಳು ಸೂಕ್ಷ್ಮವಾಗಿ ಪರಿಶೀಲಿಸುತ್ತವೆ. ಭಾರತೀಯ ಪ್ರಜೆಗಳೆಂದು ದೃಢೀಕರಿಸಲ್ಪಟ್ಟ ವ್ಯಕ್ತಿಗಳನ್ನು ಮಾತ್ರ ಭಾರತಕ್ಕೆ ಗಡೀಪಾರು ಮಾಡಲು ಒಪ್ಪಿಕೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.