ಹೊಸದಿಗಂತ ಡಿಜಿಟಲ್ ಡೆಸ್ಕ್:
ಭ್ರಷ್ಟಾಚಾರ (Corruption) ಆರೋಪದ ಸುಳಿಯಲ್ಲಿ ಆಮ್ ಆದ್ಮಿ ಪಕ್ಷ (Aam Aadmi Party) ಸಿಲುಕಿದ್ದು, ವಿದೇಶಿ ಮೂಲಗಳಿಂದ 7 ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಿಕ್ಕಿದೆ. ಈ ಹಣದ ಮೂಲದ ಬಗ್ಗೆ ಆಮ್ ಆದ್ಮಿ ಪಕ್ಷ (Aam Aadmi Party) ಯಾವುದೇ ಮಾಹಿತಿ ನೀಡಿಲ್ಲ. ಎಎಪಿಯ ವಿವಿಧ ಶಾಸಕರ ಮೂಲಕ ಹಣ ಸಂಗ್ರಹಿಸಲಾಗಿದೆ ಎಂದು ಜಾರಿ ನಿರ್ದೇಶನಲಯದ (ED) ಅಧಿಕಾರಿಗಳಿಂದ ಆರೋಪ ಕೇಳಿಬಂದಿದೆ.
ಈ ವಿದೇಶಿ ಫಂಡಿಂಗ್ ಬಗ್ಗೆ ಎಫ್‌ಸಿಆರ್‌ಎ ತನಿಖೆಯನ್ನು ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ.
ಮದ್ಯ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಸಲ್ಲಿಸಿದ ಜಾರ್ಜ್‌ಶೀಟ್‌ನಲ್ಲಿ ಆಪ್‌ಗೆ 2014 ರಿಂದ 2022ರವರೆಗೂ ವಿದೇಶದಿಂದ ಫಂಡಿಂಗ್ (Foreign Funds) ಆಗಿತ್ತು ಎಂದು ತಿಳಿಸಿದೆ.ಆಮ್ ಆದ್ಮಿ ಪಕ್ಷಕ್ಕೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸೌದಿ ಅರೇಬಿಯಾ, ಯುಎಇ, ಕುವೈತ್, ಓಮನ್ ಸೇರಿ ಹಲವು ದೇಶಗಳಿಂದ ಒಟ್ಟು 7.8 ಕೋಟಿ ರೂ. ದೇಣಿಗೆ ಹರಿದುಬಂದಿದೆ.
ಆಪ್‌ನ ಐಡಿಬಿಐ ಬ್ಯಾಂಕ್ ಖಾತೆಗೆ ಈ ವಿದೇಶಿ ಹಣ ಜಮೆಯಾಗಿದೆ. ಒಟ್ಟು 155 ಮಂದಿ 55 ಪಾಸ್‌ಪೋರ್ಟ್ ನಂಬರ್ ಬಳಸಿ 404 ಬಾರಿ 1.02 ಕೋಟಿ ರೂ. ದೇಣಿಗೆ ನೀಡಿದ್ದಾರೆ. 71 ದಾನಿಗಳು 21 ಮೊಬೈಲ್ ನಂಬರ್ ಬಳಸಿ 256 ಬಾರಿ ಒಟ್ಟು 99,90,870 ರೂ. ದೇಣಿಗೆ ನೀಡಿದ್ದಾರೆ. 75 ದಾನಿಗಳು 15 ಕ್ರೆಡಿಟ್ ಕಾರ್ಡ್ ಮೂಲಕ 148 ಬಾರಿ 19,92,123 ರೂ. ಜಮೆ ಮಾಡಿದ್ದಾರೆ.
ಕೆಲವರು ಆಪ್ ಖಾತೆಗೆ ಹಣ ಜಮೆ ಮಾಡಲು ಒಂದೇ ಪಾಸ್‌ಪೋರ್ಟ್ ಸಂಖ್ಯೆ, ಕ್ರೆಡಿಟ್ ಕಾರ್ಡ್, ಇಮೇಲ್ ಐಡಿ, ಮೊಬೈಲ್ ಸಂಖ್ಯೆಯನ್ನು ಬಳಸಿರುವುದನ್ನು ಇಡಿ ಪತ್ತೆ ಹಚ್ಚಿದೆ. ದೇಣಿಗೆ ನೀಡಿದವರ ಗುರುತು ಮತ್ತು ರಾಷ್ಟ್ರೀಯತೆಯ ವಿವರಗಳು ಬಹಿರಂಗಗೊಂಡಿಲ್ಲ.