ಲಾರಿ ಹಾಗೂ ಖಾಸಗಿ ಬಸ್‌ ನಡುವೆ ಅಪಘಾತ: 8ಜನ ದುರ್ಮರಣ, 25ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರ್ನಾಟಕದ ಹುಬ್ಬಳ್ಳಿ ನಗರದ ಹೊರವಲಯದಲ್ಲಿ ಖಾಸಗಿ ಬಸ್ ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಎಂಟು ಜನ ಸಾವನ್ನಪ್ಪಿದ್ದು, ಒಟ್ಟು 26 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲ್ಹಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ನ್ಯಾಷನಲ್‌ ಟ್ರಾವೆಲ್ಸ್‌  ಬಸ್‌ಗೆ ಮಧ್ಯರಾತ್ರಿ 12:30 ರಿಂದ 1 ರ ನಡುವೆ ಹುಬ್ಬಳ್ಳಿಯ ತಾರಿಹಾಳ ಬೈಪಾಸ್‌ನಲ್ಲಿ ಲಾರಿ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿ-ಧಾರವಾಡದ ಪೊಲೀಸ್ ಆಯುಕ್ತ ಲಾಬೂರಾವ್ ಭೇಟಿ ನೀಡಿ, ಗಾಯಾಳುಗಳಿಗೆ ಸಾಂತ್ವನ ಹೇಳಿದರು.

ಪರಿಣಾಮ ಲಾರಿಯಲ್ಲಿದ್ದ ಚಾಲಕ, ಕ್ಲೀನರ್ ಸೇರಿದಂತೆ ಮೂವರು, ನ್ಯಾಷನಲ್ ಟ್ರಾವೆಲ್ಸ್​ ಬಸ್ ಚಾಲಕರಾದ ಅತಾವುಲ್ಲಾ, ನಾಗರಾಜು, ಪ್ರಯಾಣಿಕರಾದ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಬಾಬುಸಾಬ್ (55), ಮೈಸೂರಿನ ಮೊಹಮ್ಮದ್ ದಯಾನ್ (17) ಸೇರಿ ಒಟ್ಟು ಎಂಟು ಮಂದಿ ಮೃತಪಟ್ಟಿದ್ದಾರೆ. ಅಪಘಾತದಿಂದ ನಜ್ಜುಗುಜ್ಜಾಗಿರುವ ಎರಡೂ ವಾಹನಗಳನ್ನು ಪೊಲೀಸರು ತೆರವುಗೊಳಿಸಿ, ವಾಹನ ಓಡಾಟಕ್ಕೆ ಅನುವು ಮಾಡಿಕೊಟ್ಟರು.

ಸರಣಿ ಅಪಘಾತದಿಂದ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ. ಮುಂದೆ ಚಲಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದಿದೆ. ಅದರ ಹಿಂದೆ ಬಂದ ಲಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!