ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಭಾರತ 77ನೇ ಗಣರಾಜ್ಯೋತ್ಸವ ಹಬ್ಬವನ್ನು ಆಚರಿಸುತ್ತಿದ್ದು, ದೆಹಲಿಯ ಕರ್ತವ್ಯಪಥದಲ್ಲಿ ಹತ್ತಾರು ವಿಶೇಷತೆಗಳೊಂದಿಗೆ ಗಣರಾಜ್ಯೋತ್ಸವ ಆಚರಣೆ ನಡೆಯಲಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಭಾರತದ ಹೆಮ್ಮೆ ಮತ್ತು ವೈಭವದ ಸಂಕೇತವಾದ ಈ ರಾಷ್ಟ್ರೀಯ ಹಬ್ಬ ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ ಎಂದು ಶುಭಹಾರೈಸಿದ್ದಾರೆ.
ಗಣರಾಜ್ಯೋತ್ಸವ ಪ್ರಯುಕ್ತ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮೋದಿ, “ಗಣರಾಜ್ಯೋತ್ಸವದಂದು ನಮ್ಮ ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಭಾರತದ ಹೆಮ್ಮೆ ಮತ್ತು ವೈಭವದ ಸಂಕೇತವಾದ ಈ ರಾಷ್ಟ್ರೀಯ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ. ವಿಕಸಿತ ಭಾರತಕ್ಕಾಗಿ ಸಂಕಲ್ಪವು ಇನ್ನಷ್ಟು ಬಲಗೊಳ್ಳಲಿ” ಎಂಬ ಸಂದೇಶವನ್ನು ನೀಡಿದ್ದಾರೆ.
ಇನ್ನು 77ನೇ ಗಣರಾಜ್ಯೋತ್ಸವವನ್ನು ವಂದೇ ಮಾತರಂ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದ್ದು, ಪ್ರಜಾಪ್ರಭುತ್ವದ ಸಂಭ್ರಮ, ಸೇನಾ ಶಕ್ತಿ ಹಾಗೂ ವೈವಿಧ್ಯತೆಯ ಅನಾವರಣಕ್ಕೆ ದೇಶ ಸಾಕ್ಷಿಯಾಗಲಿದೆ. ಈ ವರ್ಷ ವಿದೇಶಿ ಅತಿಥಿಗಳಾಗಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್‌ಲೇನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟ ಭಾಗಿಯಾಗಲಿದ್ದಾರೆ. ಇವರನ್ನು ಪದ್ಧತಿಯಂತೆ 21 ಗನ್ ಸೆಲ್ಯೂಟ್, ಗಾರ್ಡ್ ಆಫ್ ಹಾನರ್ ಮೂಲಕ ಗೌರವಿಸಲಾಗುತ್ತದೆ.
ವಂದೇ ಮಾತರಂ ಗೀತೆ 150 ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ವಂದೇ ಮಾತರಂ ಥೀಂನಲ್ಲೇ ಎಲ್ಲ ಕಾರ್ಯಕ್ರಮಗಳು ನಡೆಯಲಿದೆ. ಆಪರೇಷನ್ ಸಿಂಧೂರ ಮಿಷನ್ ಪರೇಡ್‌ನಲ್ಲಿ ಗಮನ ಸಳೆಯಲಿದೆ. ಬೆಳಗ್ಗೆ 10:30ಕ್ಕೆ ಪರೇಡ್ ಆರಂಭಗೊಳ್ಳಲಿದ್ದು, ಸುಮಾರು 90 ನಿಮಿಷಗಳ ಕಾಲ ಪರೇಡ್ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ.




