ಕೊಡಗು‌ ಜಿಲ್ಲೆಯ ನಾಲ್ವರು ಅಪ್ರಾಪ್ತೆಯರ ಸಹಿತ 8 ಮಂದಿ ನಾಪತ್ತೆ

ಹೊಸದಿಗಂತ ವರದಿ, ಮಡಿಕೇರಿ:

ನಾಲ್ವರು ಅಪ್ರಾಪ್ತ ಬಾಲಕಿಯರು ಸೇರಿದಂತೆ ಕೊಡಗು‌ ಜಿಲ್ಲೆಯ 8ಮಂದಿ ನಾಪತ್ತೆಯಾಗಿರುವ ಬಗ್ಗೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ವೀರಾಜಪೇಟೆ ತಾಲೂಕಿನ ಸಿದ್ದಾಪುರ ವ್ಯಾಪ್ತಿಯ ಕೂಲಿ ಕಾರ್ಮಿಕರ ಕುಟುಂಬದ ನಾಲ್ವರು ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗಿರುವ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಪೈಕಿ ಇಬ್ಬರನ್ನು ಆಟೋದಲ್ಲಿ ಕರೆದೊಯ್ದ ಪೋಷಕರು ಶಾಲೆಗೆ ತೆರಳಲೆಂದು ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಬಿಟ್ಟಿದ್ದು, ಅವರು ಮನೆಗೆ ಹಿಂತಿರುಗಿಲ್ಲ ಎನ್ನಲಾಗಿದೆ. ಮತ್ತಿಬ್ಬರು ಬಾಲಕಿಯರು ತಮ್ಮ ಅಜ್ಜಿ ಮನೆಗೆಂದು ತೆರಳಿದವರು ನಾಪತ್ತೆಯಾಗಿರುವುದಾಗಿ ಹೇಳಲಾಗಿದೆ.
ಮಗು ಸಹಿತ ಮಹಿಳೆ ನಾಪತ್ತೆ: ಗೃಹಿಣಿಯೊಬ್ಬರು ತಮ್ಮ ಮೂರು ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕೊಡ್ಲಿಪೇಟೆ ವಿ.ಎಸ್.ಎಸ್.ಎನ್.ಬ್ಯಾಂಕ್’ನ ನೌಕರ ನಿಂಗರಾಜ್ ಎಂಬವರು ದೂರು ನೀಡಿದ್ದಾರೆ.
ತಾನು ಕೆಲಸಕ್ಕೆ ತೆರಳಿದ್ದ ಸಂದರ್ಭ ತನ್ನ ಪತ್ನಿ ದಿವ್ಯಾಶ್ರೀ(30) ಹಾಗೂ ಪುತ್ರಿ ಧನುಶ್ರೀ ಕಾಣೆಯಾಗಿದ್ದು, ಅವರನ್ನು ಹುಡುಕಿಕೊಡುವಂತೆ ನಿಂಗರಾಜ್ ಮನವಿ ಮಾಡಿದ್ದಾರೆ. 157 ಸೆಂ.ಮೀ.ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಕಪ್ಪು ಕೂದಲು ಹಾಗೂ ಸಾಧಾರಣ ಮೈಕಟ್ಟು ಹೊಂದಿರುವ ದಿವ್ಯಾಶ್ರೀ ನಾಪತ್ತೆಯಾದ ಸಂದರ್ಭ ಬಿಳಿ ಬಣ್ಣದ ಚೂಡಿದಾರ್ ಧರಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಾಗೇಯೇ ಪುತ್ರಿ ಧನುಶ್ರೀ 91ಸೆಂ.ಮೀ.ಎತ್ತರ, ಗೋಧಿ ಮೈಬಣ್ಣ,ನೀಲಿ ಬಣ್ಣದ ಫ್ರಾಕ್ ಧರಿಸಿರುವುದಾಗಿ ಹೇಳಲಾಗಿದ್ದು, ಇಬ್ಬರೂ ಕನ್ನಡ ಮಾತನಾಡುತ್ತಾರೆ ಎಂದು ತಿಳಿಸಲಾಗಿದೆ.
ಯುವತಿ ನಾಪತ್ತೆ: ಮೂಲತಃ ಚಿಕ್ಕಮಗಳೂರಿನ ನರಸಿಂಹರಾಜಪುರದ ಸುಂಕದಕಟ್ಟೆ ನಿವಾಸಿಯಾಗಿದ್ದು, ಪ್ರಸಕ್ತ ಸೋಮವಾರಪೇಟೆಯ ಫಯರ್ ಸ್ಟೇಷನ್’ನಲ್ಲಿ ಸೈಟ್ ಇನ್’ಚಾರ್ಜ್ ಆಗಿರುವ ಶಿವರಾಜಯ್ಯ ಮಠಾಧರ್ ಅವರ ಪುತ್ರಿ ಮಂಜುಳಾ (20) ಎಂಬಾಕೆ ಜೂ.27ರಿಂದ ನಾಪತ್ತೆಯಾಗಿರುವುದಾಗಿ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ಒಂದೂವರೆ ತಿಂಗಳಿನಿಂದ ಸೋಮವಾರಪೇಟೆಯ ಚೌಡ್ಲುವಿನಲ್ಲಿ ನೆಲೆಸಿದ್ದ ಮಂಜುಳಾ, ಎನ್.ಆರ್.ಪುರ ಸರಕಾರಿ ಪ.ಪೂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಆಕೆ ಸುಮನ್ ಎಂಬಾತನೊಂದಿಗೆ ಸ್ನೇಹ ಹೊಂದಿದ್ದು, ಆತನೊಂದಿಗೆ ತೆರಳಿರಬಹುದೆಂದು ಆಕೆಯ ತಂದೆ ಶಿವರಾಜಯ್ಯ ದೂರಿನಲ್ಲಿ ತಿಳಿಸಿದ್ದಾರೆ.
ಕೆಲಸಕ್ಕೆ‌ ತೆರಳಿದ್ದ ವ್ಯಕ್ತಿ ನಾಪತ್ತೆ: ತಮಿಳುನಾಡಿಗೆ ಕೆಲಸಕ್ಕೆಂದು ತೆರಳಿದ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಡಿಕೇರಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಮಣಿಕಂಠ (38) ಎಂಬವರು ಜೂ.23ರಂದು ಕೆಲಸಕ್ಕೆಂದು ತಮಿಳುನಾಡಿಗೆ ತೆರಳಿ ಹೋದವರು ಆ ಬಳಿಕ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಪತ್ನಿ ಮಂಜುಳಾ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!