ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ 8 ವರ್ಷದ ಬಾಲಕ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ದತ್ತರಾಜಪುರ ಗ್ರಾಮದ 8 ವರ್ಷದ ಬಾಲಕ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆ(ಕೆಎಫ್‌ಡಿ)ಗೆ ಬಲಿಯಾಗಿದ್ದಾನೆ.

ಮೃತ ಬಾಲಕನನ್ನು ರಚಿತ್ ಎಂದು ಗುರುತಿಸಲಾಗಿದೆ.

ಆರೋಗ್ಯ ಅಧಿಕಾರಿಗಳ ಪ್ರಕಾರ, ರಚಿತ್ ಅವರ ಸಹೋದರಿ ರಮ್ಯಾ ಅವರಿಗೆ ಏಪ್ರಿಲ್ 4 ರಂದು ಜ್ವರ ಬಂದಿತ್ತು. ಆಕೆಯನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆಗೆ ಒಳಪಡಿಸಿದಾಗ ಕೆಎಫ್‌ಡಿ ಪಾಸಿಟಿವ್ ದೃಢಪಟ್ಟಿತ್ತು. ಮರುದಿನ, ಏಪ್ರಿಲ್ 5 ರಂದು, ರಚಿತ್ ನನ್ನು ಆಯಾಸ ಮತ್ತು ವಾಂತಿಯಿಂದ ಅದೇ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೂ ಕೆಎಫ್ ಡಿ ಪಾಸಿಟಿವ್ ಬಂದಿದೆ. ನಂತರ ಇಬ್ಬರೂ ಮಕ್ಕಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ(ಎಬಿಎಆರ್‌ಕೆ) ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಯಿತು.

ರಮ್ಯಾ ಚಿಕಿತ್ಸೆಗೆ ಸ್ಪಂದಿಸಿ ಡಿಸ್ಚಾರ್ಜ್ ಆಗಿದ್ದರೂ, ರಚಿತ್ ಅವರ ಆರೋಗ್ಯ ಸುಧಾರಿಸಲಿಲ್ಲ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ವೈದ್ಯರ ಪ್ರಯತ್ನದ ಹೊರತಾಗಿಯೂ ಬಾಲಕ ಗುರುವಾರ ತಡರಾತ್ರಿ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸಾವಿನ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ವಿವರವಾದ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!