ಹೊಸದಿಗಂತ ಡಿಜಿಟಲ್ ಡೆಸ್ಕ್;
ಲಡಾಖ್‌ನ ಗಡಿಯ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾದ ಸೇನೆಗಳ ಹಿಂತೆಗೆದುಕೊಳ್ಳುವ ಕಾರ್ಯ ಶೇಕಡ 80-90ರಷ್ಟು ಮುಗಿದಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಎಲ್ಲ ರೀತಿಯ ಮೂಲಸೌಕರ್ಯ ತೆರವು ಮತ್ತು ಸೇನಾಪಡೆಗಳ ಹಿಂತೆಗೆತವನ್ನು ಪ್ರಕ್ರಿಯೆ ಒಳಗೊಂಡಿದೆ. ಸೇನಾಪಡೆಗಳ ಹಿಂತೆಗೆತ ಪ್ರಕ್ರಿಯೆ ಅಕ್ಟೋಬರ್ 29ಕ್ಕೆ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
‘ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿ ನಿಯೋಜಿಸಿರುವ ತಮ್ಮ ಸೇನೆಗಳನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಮೊದಲ ಹೆಜ್ಜೆಯಾಗಿದ್ದು, ಗಸ್ತು ನಡೆಸುವ ಪ್ರಕ್ರಿಯೆಯು ಅಂತಿಮವಾಗಿ, 2020ರ ಏಪ್ರಿಲ್‌ಗಿಂತ ಮುನ್ನ ಇದ್ದ ಸ್ಥಿತಿಗೆ ಮರಳಲಿದೆ’ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾನುವಾರ ಹೇಳಿದ್ದರು.
‘ನೆರೆ ರಾಷ್ಟ್ರದಿಂದಲೂ ಯಾವುದೇ ಸಮಸ್ಯೆಯಾಗದಿದ್ದರೆ, ಸಹಜ ಸ್ಥಿತಿ ನಿರ್ಮಾಣ ಮಾಡುವುದು ಭಾರತದ ಮುಂದಿನ ಹೆಜ್ಜೆಯಾಗಿದೆ’ಎಂದು ಹೇಳಿದ್ದರು.
ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು, ಸೇನಾಪಡೆ ಹಿಂತೆಗೆತ ಸೇರಿದಂತೆ ಗಡಿಯಲ್ಲಿ ಉದ್ವಿಗ್ನತೆ ಶಮನಕ್ಕೆ ಸಂಬಂಧಿಸಿದ ಒಪ್ಪಂದವನ್ನು ಅನುಮೋದಿಸಿದ್ದರು.