ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಶಾಲೆಯಲ್ಲಿ ಬಿಸ್ಕತ್ತು ತಿಂದ 80 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಜಿಲ್ಲಾ ಕೌನ್ಸಿಲ್ ಶಾಲೆಯೊಂದರ ಸುಮಾರು 80 ವಿದ್ಯಾರ್ಥಿಗಳು ಪೌಷ್ಟಿಕ ಆಹಾರ ಯೋಜನೆಯಡಿ ನೀಡಲಾದ ಬಿಸ್ಕತ್‌ಗಳನ್ನು ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 8:30ರ ಸುಮಾರಿಗೆ ಕೇಕೇಟ್ ಜಲಗಾಂವ್ ಗ್ರಾಮದ ಶಾಲೆಯಲ್ಲಿ ಬಿಸ್ಕೆಟ್ ತಿಂದ ಮಕ್ಕಳು ವಾಂತಿ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಷಯ ತಿಳಿದ ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳು ಕೂಡಲೇ ಶಾಲೆಗೆ ಆಗಮಿಸಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು. ವಿದ್ಯಾರ್ಥಿಗಳನ್ನು ಗ್ರಾಮಾಂತರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವಿವರಿಸಲಾಗಿದೆ.