MUDA CASE | 800 ಪುಟಗಳ ಪೇಪರ್‌ಗಳು, ಹಾರ್ಡ್ ಡಿಸ್ಕ್ ಇಡಿ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮೈಸೂರಿನ ಮುಡಾ ಕಚೇರಿ ಮೇಲೆ ಶುಕ್ರವಾರ ದಿಢೀರ್ ದಾಳಿ ನಡೆಸಿದ್ದ ಜಾರಿನಿರ್ದೇಶನಾಲಯದ ಅಧಿಕಾರಿಗಳು ಸತತ 2 ದಿನಗಳ ಕಾಲ ಪರಿಶೀಲನೆ ನಡೆಸಿ, 800 ಪುಟಗಳ ಪೇಪರ್‌ಗಳು, ಹಾರ್ಡ್ ಡಿಸ್ಕ್ ಅನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಸುಮಾರು 8 ಅಧಿಕಾರಿಗಳ ಜಾರಿನಿರ್ದೇಶನಾಲಯ ತಂಡ ಮೈಸೂರಿನ ಮುಡಾ ಪರಿಶೀಲನೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಬಿಎಂ ಒಳಗೊಂಡ ಮುಡಾ ನಿವೇಶನ ಹಂಚಿಕೆ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ  800 ಪುಟಗಳ ದಾಖಲೆಗಳು ಮತ್ತು ಹಾರ್ಡ್ ಡಿಸ್ಕ್ ಅನ್ನು ವಶಪಡಿಸಿಕೊಂಡಿದ್ದಾರೆ.

ಭಾನುವಾರ ಬೆಳಗಿನ ಜಾವ 2.30ರವರೆಗೆ ಅಧಿಕಾರಿಗಳು ಶೋಧ ನಡೆಸಿ 50:50 ಅನುಪಾತದಡಿ ಹಂಚಿಕೆ ಮಾಡಿರುವ ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ. ಮುಡಾ ಆಯುಕ್ತ ಎಎನ್ ರಘುನಂದನ್ ಮತ್ತು ಇತರ ಅಧಿಕಾರಿಗಳು ಪಾರ್ವತಿ ಒಡೆತನದ ಕೆಸರೆಯಲ್ಲಿ 3 ಎಕರೆ 18 ಗುಂಟಾ ಜಮೀನು ಮತ್ತು ವಿಜಯನಗರದಲ್ಲಿ ಅವರಿಗೆ ಮಂಜೂರು ಮಾಡಿದ 24 ನಿವೇಶನಗಳಿಗೆ ಸಂಬಂಧಿಸಿದ ಎಲ್ಲಾ ಪತ್ರಗಳನ್ನು ಒದಗಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಇಡಿ ಅಧಿಕಾರಿಗಳು ಸಾಫ್ಟ್ ಮತ್ತು ಹಾರ್ಡ್ ಕಾಪಿಗಳನ್ನು ತೆಗೆದುಕೊಂಡು ಫೋಟೋಕಾಪಿ ಪಡೆದರು. ವಶಪಡಿಸಿಕೊಂಡ ದಾಖಲೆಗಳನ್ನು ಪ್ಯಾಕ್ ಮಾಡಿ ಪೊಲೀಸ್ ಭದ್ರತೆಯಲ್ಲಿ ಸ್ಥಳಾಂತರಿಸಿದರು.

41 ಗಂಟೆಗಳ ನಡೆದ ಈ ದಾಳಿ ಮತ್ತು ಶೋಧ ಕಾರ್ಯಾಚರಣೆ ವೇಳೆ ಮುಡಾ ಕಚೇರಿಯಲ್ಲಿ ಸ್ಥಳೀಯ ಪೊಲೀಸರೊಂದಿಗೆ ಸುಮಾರು 20 ಶಸ್ತ್ರಸಜ್ಜಿತ ಸಿಆರ್‌ಪಿಎಫ್ ಸಿಬ್ಬಂದಿ ಹಗಲು-ರಾತ್ರಿ ಭದ್ರತಾ ಮೇಲುಸ್ತುವಾರಿ ನೋಡಿಕೊಂಡಿದ್ದರು. ತನಿಖೆ ವೇಳೆ ಇಡಿ ಅಧಿಕಾರಿಗಳಿಗೆ ಮುಡಾ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ರಘುನಂದನ್ ಸುದ್ದಿಗಾರರಿಗೆ ತಿಳಿಸಿದರು. ಸೋಮವಾರದಿಂದ ಮುಡಾ ತನ್ನ ಸಾಮಾನ್ಯ ಕಾರ್ಯಾಚರಣೆಯನ್ನು ಪುನರಾರಂಭಿಸಲಿದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!