ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯುದ್ಧದಲ್ಲಿ ರಷ್ಯಾದ ಸೇನೆ ಸೇರಿಕೊಂಡಿದ್ದವರ ಪೈಕಿ 85 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ 20 ಮಂದಿಯನ್ನು ಬಿಡಿಸಿಕೊಂಡು ಬರುವ ಪ್ರಯತ್ನ ಸಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರಷ್ಯಾ ಸೇನೆಯ ಪರವಾಗಿ ಯುದ್ಧ ಮಾಡಲು ಅಕ್ರಮವಾಗಿ ಅಥವಾ ಒಪ್ಪಂದದ ಮೇರೆಗೆ ಸೇರಿಕೊಂಡ ಭಾರತೀಯರ ಬಿಡುಗಡೆಗೆ ಭಾರತ ಸರ್ಕಾರ ಮನವಿ ಮಾಡಿತ್ತು. ಅದಕ್ಕೆ ಸ್ಪಂದಿಸಿದ್ದ ರಷ್ಯಾ 85 ಭಾರತೀಯರನ್ನು ಸೇನೆಯಿಂದ ಬಿಡುಗಡೆ ಮಾಡಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.
ರಷ್ಯಾ ಅಧ್ಯಕ್ಷರ ಆಹ್ವಾನದ ಮೇರೆಗೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕಜಾನ್‌ಗೆ ತೆರಳಲಿದ್ದಾರೆ. ಆ ದೇಶದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಸಂವಾದದಲ್ಲಿ ಉಳಿದ ಭಾರತೀಯರ ಬಿಡುಗಡೆಗೆ ಪ್ರಸ್ತಾಪಿಸಲಾಗುವುದು. ರಷ್ಯಾವೂ ಇದಕ್ಕೆ ಸ್ಪಂದಿಸಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರು ಜುಲೈ ತಿಂಗಳಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಲ್ಲಿ ಸೇನೆಯಲ್ಲಿರುವ ಭಾರತೀಯರ ಬಿಡುಗಡೆಗೆ ಪ್ರಸ್ತಾಪಿಸಿದ್ದರು. ಇದನ್ನು ಅವರು ಅಂಗೀಕರಿಸಿದ್ದರು. ಮಾಹಿತಿಯ ಪ್ರಕಾರ, 91ಕ್ಕೂ ಹೆಚ್ಚು ಭಾರತೀಯರು ರಷ್ಯಾ ಸೇನೆಯಲ್ಲಿ ಸೇರಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಯುದ್ಧದಲ್ಲಿ 21 ಮಂದಿ ಸಾವಿಗೀಡಾಗಿದ್ದಾರೆ. ಅವರ ಮೃತದೇಹಗಳನ್ನು ಕುಟುಂಬಸ್ಥರಿಗೆ ರವಾನಿಸಲಾಗಿದೆ ಎಂದು ಭಾರತ ಸರ್ಕಾರ ತಿಳಿಸಿದೆ.