ಹೊಸದಿಗಂತ ವರದಿ,ಹಾವೇರಿ:
ಕೋವಿಡ್ ನಿರ್ಬಂಧಗಳು ತೆರವಾದ ಕೂಡಲೇ ಅಖಿಲ ಭಾರತ ೮೬ನೇ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ಆಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಈಗಾಗಲೇ ಚರ್ಚಿಸಲಾಗಿದೆ ಎಂದು ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದರು.
ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದಲ್ಲಿ ಕೇಂದ್ರ ಸರ್ಕಾರ ಕೋವಿಡ್ ನಿಯಮಗಳನ್ನು ಜಾರಿಗೊಳಿಸಿರುವುದರಿಂದ ಸಮ್ಮೇಳನ ಆಯೋಜನೆ ಸಾಧ್ಯವಾಗುತ್ತಿಲ್ಲ. ಕೋವಿಡ್ ನಿರ್ಬಂಧಗಳು ತೆರವಾದ ಕೂಡಲೇ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ವೈಶಿಷ್ಟ್ಯಪೂರ್ಣವಾಗಿ ಆಯೋಜಿಸಲು ಮುಖ್ಯಮಂತ್ರಿಗಳು ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದರು.
ಹಾವೇರಿ ಜಿಲ್ಲೆಯ ಬಂಡಾಯ ಸಾಹಿತಿ ಪ್ರೊ. ಚಂಪಾ ಅವರ ಸಮಗ್ರ ಸಾಹಿತ್ಯ ಸಂಪುಟ ಪ್ರಕಟಣೆಗಾಗಿ ೧ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.
ಹಾವೇರಿಯಲ್ಲಿ ಕನ್ನಡ ಭವನ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಶೀರ್ಘದಲ್ಲಿ ಹಾವೇರಿಯಲ್ಲಿ ಪಾದಯಾತ್ರೆಯನ್ನು ನಡೆಸಿ ದಾನಿಗಳಿಂದ ನಿಧಿ ಸಂಗ್ರಹಿಸಲಾಗುವುದು. ಗುಂಪುಗಾರಿಕೆಗೆ ಅವಕಾಶ ನೀಡದೇ ಎಲ್ಲರನ್ನು ಒಗ್ಗೂಡಿಸಿಕೊಂಡು ಕನ್ನಡ ಕೆಲಸವನ್ನು ಮಾಡುತ್ತೇನೆ. ಫೆ.೨೪, ೨೫ರಂದು ಬೆಂಗಳೂರಿನಲ್ಲಿ ಕಾರ್ಯಕಾರಿಣಿ ಸಮಿತಿ ಸಭೆ ನಡೆಸಿ, ನಂತರ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿ ಸರ್ವಸದಸ್ಯರ ವಿಶೇಷ ಸಭೆಯನ್ನು ಕರೆಯಲಾಗುವುದು ಎಂದು ಹೇಳಿದರು.