ಹೊಸದಿಗಂತ, ಬೆಂಗಳೂರು:
ಹೊಟ್ಟೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಮಾದಕವಸ್ತು ಕೊಕೇನ್ ಮಾತ್ರೆಗಳನ್ನು ಸಾಗಿಸುತ್ತಿದ್ದ ಬ್ರೆಜಿಲ್ ಪ್ರಜೆಯನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಬಂಧಿಸಿ, 9.20 ಕೋಟಿ ರೂ ಮೌಲ್ಯದ 91 ಕೊಕೇನ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.
ಫೆ.9ರಂದು ಬೆಳಗ್ಗೆ ಬ್ರೆಜಿಲ್ ಪ್ರಜೆಯು ವೆನೆಜುವೆಲಾದಿಂದ ದುಬೈ ಮಾರ್ಗವಾಗಿ ತೆರಳಿ ಅಲ್ಲಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ. ಇದೇ ವೇಳೆ ಬ್ರೆಜಿಲ್‌ನಿಂದ ಅಕ್ರಮವಾಗಿ ಮಾದಕ ವಸ್ತು ಸಾಗಾಟವಾಗುತ್ತಿದೆ ಎಂಬ ಮಾಹಿತಿ ದೊರೆತ ಡಿಆರ್‌ಐ ಅಧಿಕಾರಿಗಳು, ನಿರ್ದಿಷ್ಟ ವಿಮಾನದಲ್ಲಿದ್ದ ಪ್ರತಿಯೊಬ್ಬ ಪ್ರಯಾಣಿಕರನ್ನು ಪರಿಶೀಲನೆ ನಡೆಸಿದ್ದಾರೆ.
ಆಗ ಭಾರತದ ಪ್ರವಾಸ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದ ಆರೋಪಿಯನ್ನು ಕಂಡು ಅನುಮಾನಗೊಂಡ ಪೊಲೀಸರು, ಮೊದಲು ಆತನ ಬ್ಯಾಗನ್ನು ತಪಾಸಣೆ ಮಾಡಿದ್ದಾರೆ. ಅದರಲ್ಲೇನು ಪತ್ತೆಯಾಗಿಲ್ಲ. ನಂತರ ಅವನು ತುಂಬಾ ಆಯಾಸಗೊಂಡವನಂತೆ ಕಾಣಿಸುತ್ತಿದ್ದ. ಅವನ ದೇಹದಲ್ಲಿ ಕೊಂಚ ಬದಲಾವಣೆ ಹಾಗೂ ಅವನ ವರ್ತನೆ ವಿಭಿನ್ನವಾಗಿದ್ದ ಹಿನ್ನೆಲೆ ಬ್ರೆಜಿಲ್ ಪ್ರಜೆಯನ್ನು ವಶಕ್ಕೆ ಪಡೆದುಕೊಂಡು ಪೊಲೀಸರು, ಆಸ್ಪತ್ರೆಗೆ ಕರೆತಂದು ಸ್ಕ್ಯಾನಿಂಗ್ ಮಾಡಿಸಿದಾಗ ಹೊಟ್ಟೆಯೊಳಗೆ ಮಾತ್ರೆಗಳು ಪತ್ತೆಯಾಗಿತ್ತು.
ಅದನ್ನು ಹೊರ ತೆಗೆಯಲು ಆರೋಪಿಗೆ ಐದು ದಿನಗಳವರೆಗೆ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಚಿಕಿತ್ಸೆಯಿಂದ ಆರೋಪಿಯ ಹೊಟ್ಟೆಯಲ್ಲಿ ಅವಿತಿಟ್ಟುಕೊಂಡಿದ್ದ 9.20 ಕೋಟಿ ರೂ. ಬೆಲೆಬಾಳುವ 91 ಕೊಕೇನ್ ಮಾತ್ರೆಗಳನ್ನು ಪೊಲೀಸರು ಜಪ್ತಿಮಾಡಿದ್ದಾರೆ. ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಸದ್ಯ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.