ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾವೇರಿ ನಗರದ ಮಣಿಗಾರ ಓಣಿಯಲ್ಲಿ ಬಾವಿಗೆ ಸಂಪರ್ಕ ಕಲ್ಪಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ಗುತ್ತಿಗೆ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಹೆಸ್ಕಾಂ ನೌಕರರ ನಿರ್ಲಕ್ಷ್ಯದಿಂದ ಯುವಕ ಸಾವನ್ನಪ್ಪಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಗುತ್ತಿಗೆ ಕಾರ್ಮಿಕ ಸುರೇಶ್ ಮೃತಪಟ್ಟಿದ್ದು, ನಿಂಗಪ್ಪ ಗಾಯಗೊಂಡಿದ್ದಾರೆ. ಇಬ್ಬರು ಬಾವಿಗೆ ಹೊಸ ವಿದ್ಯುತ್ ಲೈನ್ ಹಾಕುತ್ತಿದ್ದಾಗ ಹಠಾತ್ ವಿದ್ಯುತ್ ಹರಿದು ಅಪಘಾತ ಸಂಭವಿಸಿದೆ.
ವಿದ್ಯುತ್ ಸಂಪರ್ಕ ಕಡಿತಗೊಂಡು ಕಾಮಗಾರಿ ನಡೆಯುತ್ತಿದ್ದರೂ ಅವಘಡ ಸಂಭವಿಸಿದೆ. ಗೊತ್ತಿಲ್ಲದೆ ಏಕಾಏಕಿ ವಿದ್ಯುತ್ ಕನೆಕ್ಟ್ ಆಗಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಯುವಕನ ಕುಟುಂಬಸ್ಥರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಗುತ್ತಿಗೆ ಕಾರ್ಮಿಕನ ಶವ ಕಂಬದಲ್ಲಿಯೇ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗಾಯಗೊಂಡ ನಿಂಗಪ್ಪ ಬದುಕುಳಿದಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತ ಕಾರ್ಮಿಕನ ಕುಟುಂಬಕ್ಕೆ ₹5 ಲಕ್ಷ ಪರಿಹಾರ:
ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಮತ್ತು ಗಾಯಾಳುವಿಗೆ ₹1 ಲಕ್ಷ ಪರಿಹಾರ ಕೊಡುತ್ತೇವೆ. ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಂದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗುವುದು. ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಹೇಳಿದರು.