ಹೊಸ ದಿಗಂತ ವರದಿ, ಮೈಸೂರು:
ಬಸ್ಸಿಗಾಗಿ ಕಾಯುತ್ತ ನಿಂತಿದ್ದ ಯುವಕನೊಬ್ಬನ ಕೈಗೆ ಮಹಿಳೆಯೊಬ್ಬರು ಮಗವನ್ನು ನೀಡಿ, ಪರಾರಿಯಾಗಿದ್ದು, ಆ ಮಗುವನ್ನು ಯುವಕ ಮೈಸೂರಿನ ಪೊಲೀಸ್ ಠಾಣೆಗೆ ತಂದು ಒಪ್ಪಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ತಾಯಿ ಬಿಟ್ಟು ಹೋದ ಹಸುಕಂದನ ಆರೈಕೆ ಮಾಡಿದ ಮೈಸೂರಿನ ಲಷ್ಕರ್ ಠಾಣಾ ಪೊಲೀಸರು ಬಾಲಮಂದಿರದ ವಶಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಮೈಸೂರಿನ ಹೆಚ್.ಡಿ.ಕೋಟೆಯ ನಿವಾಸಿ ರಘು ವೈಯುಕ್ತಿಕ ಕೆಲಸಕ್ಕಾಗಿ ರಾಯಚೂರಿಗೆ ತೆರಳಿದ್ದರು.ಮೈಸೂರಿಗೆ ಹಿಂದಿರುಗುವ ಉದ್ದೇಶದಿಂದ ರಾಯಚೂರು ಬಸ್ ಸ್ಟ್ಯಾಂಡ್ ನಲ್ಲಿ ಬಸ್ ಗಾಗಿ ಕಾಯುತ್ತಿದ್ದರು.ಇದ್ದಕ್ಕಿದ್ದಂತೆ ಮಧ್ಯವಯಸ್ಕ ಮಹಿಳೆಯೊಬ್ಬಳು ರಘು ಬಳಿ ಬಂದು ತನ್ನಲ್ಲಿದ್ದ 9 ತಿಂಗಳ ಮಗುವನ್ನ ಕೊಟ್ಟು ನೋಡಿಕೊಳ್ಳಿ ಈಗ ಬರ್ತೀನಿ ಎಂದು ಹೇಳಿ ಹೋಗಿದ್ದಾಳೆ. ಆದರೆ ಎಷ್ಟೇ ಹೊತ್ತಾದರೂ ಆ ಮಹಿಳೆ ವಾಪಾಸ್ ಬರಲಿಲ್ಲ, ಇದರಿಂದ ದಿಕ್ಕು ತೋಚದಂತಾದ ರಘು, ಮಗುವಿನೊಂದಿಗೆ ಬಸ್ ಹತ್ತಿ ಮೈಸೂರಿಗೆ ಬಂದಿದ್ದಾರೆ. ಬಳಿಕ ಆ ಮಗುವನ್ನು ಲಷ್ಕರ್ ಠಾಣೆಗೆ ತೆಗೆದುಕೊಂಡು ಹೋಗಿ, ನಡೆದ ಘಟನೆಯನ್ನು ವಿವರಿಸಿ, ಪೊಲೀಸರ ವಶಕ್ಕೆ ಮಗುವನ್ನು ನೀಡಿದ್ದಾರೆ. ತಕ್ಷಣವೇ ರಾಯಚೂರು ಪೊಲೀಸರಿಗೆ ದೂರವಾಣಿ ಕರೆ ಮಾಡಿದ ಲಷ್ಕರ್ ಠಾಣೆಯ ಪೊಲೀಸರು, ಘಟನೆ ಬಗ್ಗೆ ಮಾಹಿತಿ ನೀಡಿ, ಮಗು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿರುವ ಕುರಿತು ವಿಚಾರಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ರಾಯಚೂರು ಠಾಣೆಯ ಪೊಲೀಸರು ತಿಳಿಸಿದ್ದಾರೆ. ಆ ಊರಿನ ಮಗು ತಮ್ಮ ಬಳಿಯಿದ್ದು, ಮಗು ಕಾಣೆಯಾಗಿರುವ ಬಗ್ಗೆ ಯಾವುದಾದರೂ ದೂರು ಬಂದರೆ ತಮ್ಮನ್ನು ಸಂಪರ್ಕಿಸುವoತೆ ತಿಳಿಸಿ, ಮಗುವನ್ನು ಕೆಲಕಾಲ ಪಾಲನೆ ಮಾಡಿದ ಬಳಿಕ ಬಾಲಮಂದಿರದ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅವರ ವಶಕ್ಕೆ ಮಗುವನ್ನು ಪಾಲನೆಗಾಗಿ ನೀಡಿದ್ದಾರೆ.