October 13, 2026
Tuesday, October 13, 2026
spot_img

ನಾಯಕ ಸಮಾಜ ಒಗ್ಗಟ್ಟಿನಿಂದ ಸಾಗಿದಾಗ ಮಾತ್ರ ಅಭಿವೃದ್ಧಿ ಸಾಧ್ಯ: ಸಚಿವ ಸತೀಶ್ ಜಾರಕಿಹೊಳಿ

ಹೊಸದಿಗಂತ ವರದಿ ಚಿತ್ರದುರ್ಗ:

ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ನಾಯಕ ಸಮಾಜ ಒಗ್ಗಟ್ಟಿನಿಂದ ಸಾಗುವ ಮೂಲಕ ಅಭಿವೃದ್ಧಿ ಸಾಧಿಸಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದರು.

ಚಿತ್ರದುರ್ಗ ಜಿಲ್ಲಾ ನಾಯಕ ಸಮಿತಿ ವತಿಯಿಂದ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಾಡದೊರೆ ರಾಜವೀರ ಮದಕರಿ ನಾಯಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆ ಬಂದಾಗ ಮಾತ್ರ ಪಕ್ಷ. ಚುನಾವಣೆ ನಂತರ ಎಲ್ಲರೂ ಪಕ್ಷಾತೀತವಾಗಿ ಒಂದಾಗಿ ಒಗ್ಗಟ್ಟಿನಿಂದ ನಡೆಯಬೇಕು. ಸಮುದಾಯಕ್ಕೆ ತೊಂದರೆ ಬಂದಾಗ ಒಗ್ಗಟ್ಟಿನ ಹೋರಾಟ ನಡೆಸಬೇಕು. ಸಮಾಜದಲ್ಲಿ ಒಗ್ಗಟ್ಟಿನ ಬಲವಿದ್ದಾಗ ಮಾತ್ರ ಯಾವುದೇ ಸರ್ಕಾರ ಮಹತ್ವ ನೀಡುತ್ತವೆ ಎಂದು ಕಿವಿಮಾತು ಹೇಳಿದರು. 

ಶೈಕ್ಷಣಿಕ ಆರ್ಥಿಕವಾಗಿ ಹಿಂದುಳಿದಿದೆ. ಈ ಕುರಿತು ಅಗತ್ಯ ಚರ್ಚೆ ನಡೆಯಬೇಕು. ಸರ್ಕಾರಿ ಉದ್ಯೋಗದಲ್ಲಿ ಆದ್ಯತೆ ದೊರೆಯಬೇಕು. ಅಂದಾಗ ಇಂತಹ ಕಾರ್ಯಕ್ರಮಗಳು ಸಾರ್ಥಕ. ಈ ಸಮುದಾಯವನ್ನು ಮೇಲೆತ್ತುವ ಕೆಲಸವಾಗಬೇಕು. ಅನೇಖ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಅವನ್ನು ಸಮರ್ಪಕವಾಗಿ ಬಳಸಿಕೊಂಡು ಸಮುದಾಯದ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಬುಡಕಟ್ಟು ಇಲಾಖೆ ಮೂಲಕ ಸಮುದಾಯಕ್ಕೆ ನೆರವು ನೀಡುವ ಕೆಲಸ ರಾಜ್ಯ ಸರ್ಕಾರ ಮಾಡಲಿದೆ ಎಂದರು.

ರಾಜ್ಯದಲ್ಲಿ ಅನೇಕ ರಾಜಮನೆತನಗಳು ಆಡಳಿತ ನಡೆಸಿವೆ. ಅವರಲ್ಲಿ ಪಾಳೇಯಗಾರರ 77 ಕಡೆಗಳಲ್ಲಿ ಆಡಳಿತ ನಡೆಸಿದ್ದಾರೆ. ತಮ್ಮ ಆಡಳಿತದ ಅವಧಿಯಲ್ಲಿ ಅನೇಕ ಮಹತ್ತರ ಕಾರ್ಯಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಿಸುತ್ತಾ ಬರಲಾಗಿದೆ. ಆ ಮೂಲಕ ಅವರ ಇತಿಹಾಸವನ್ನು ಮುಂದಿನ ಪೀಳಿಗೆಯ ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಮದಕರಿ ನಾಯಕ ಕೇವಲ ಒಂದು ಜಾತಿಗೆ ಸೀಮಿತವಲ್ಲ. ಅವರು ತಮ್ಮ ಆಡಳಿತದ ಅವಧಿಯಲ್ಲಿ ಎಲ್ಲ ಸಮುದಾಯದ ಜನರಿಗೆ ಸಮಾನ ಅವಕಾಶ ಕಲ್ಪಿಸಿದ್ದಾರೆ. ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅದರಂತೆ ಮಹರ್ಷಿ ವಾಲ್ಮೀಕಿಯವರು ಬರೆದ ’ವಾಲ್ಮೀಕಿ ರಾಮಾಯಣ’ ಎಲ್ಲ ಸಮುದಾಯದವರಿಗೆ ಪೂಜ್ಯನೀಯ ಗ್ರಂಥವಾಗಿದೆ. ಹಾಗಾಗಿ ಇವರ ಜಯಂತಿಯನ್ನು ಎಲ್ಲ ಸಮುದಾಯದವರು ಸೇರಿ ಆಚರಿಸಬೇಕು ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಶೇಕಡಾ 56 ರಷ್ಟು ಮೀಸಲಾತಿ ನೀಡಬೇಕು. ಕಳೆದ ಅನೇಕ ವರ್ಷಗಳಿಂದ ನಾವು ಶೋಷಣೆ ಅನುಭವಿಸುತ್ತಾ ಬಂದಿದ್ದೇವೆ. ಈ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಮಾಣವನ್ನು ಶೇಕಡಾ 3 ರಿಂದ 7 ರಷ್ಟು ಹೆಚ್ಚಳ ಮಾಡಿತ್ತು. ಆದರೆ ನ್ಯಾಯಾಲಯ ಇದನ್ನು ಕಡಿತಗೊಳಿಸಿ ಶೇಕಡಾ 50ಕ್ಕೆ ಸೀಮಿತ ಮಾಡಿದೆ. ಹಾಗಾಗಿ ರಾಜ್ಯ ಸರ್ಕಾರ ಸರ್ವಪಕ್ಷಗಳ ಸಭೆ ಕರೆದು ಈ ಕುರಿತು ಚರ್ಚಿಸಬೇಕು. ಸುಪ್ರಿಂ ಕೋರ್ಟ್‌ಗೆ ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ, ಮಾಜಿ ಸಚಿವರಾದ ಶಿವನಗೌಡ, ರಾಜುಗೌಡ, ಮಾಜಿ ಸಚಿವ ಹೆಚ್.ಆಂಜನೇಯ, ವಿ.ಎಸ್.ಉಗ್ರಪ್ಪ, ಮಾಜಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಗೌರವಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಅಧ್ಯಕ್ಷ ವೆಂಕಟೇಶ್, ಖಜಾಂಚಿ ಮಂಜುನಾಥ್, ಪಿಳ್ಳೆಕೆರೇನಹಳ್ಳಿ ಮಂಜುನಾಥ್, ರಾಜು ಲಕ್ಷ್ಮಿಸಾಗರ ಸೇರಿದಂತೆ ನಾಯಕ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿವಿಧ ಮಠಾಧೀಶರು ಸಮ್ಮುಖ ವಹಿಸಿದ್ದರು.

Must Read