ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್ ಅಭಿಮಾನಿಗಳಿಗೆ ಈ ಬಾರಿಯ ಹುಟ್ಟುಹಬ್ಬ ವಿಶೇಷವಾಗುವ ನಿರೀಕ್ಷೆಯಿದೆ. ಶಾರುಖ್ ಅಭಿನಯದ ಬಹುನಿರೀಕ್ಷಿತ ‘ಕಿಂಗ್’ ಚಿತ್ರದ ಟೀಸರ್ ಅನ್ನು ನವೆಂಬರ್ 2ರಂದು, ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲು ನಿರ್ದೇಶಕ ಸಿದ್ಧಾರ್ಥ್ ಆನಂದ್ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಈ ಕುರಿತು ಚಿತ್ರತಂಡದಿಂದ ಅಧಿಕೃತ ಘೋಷಣೆ ಇನ್ನು ಹೊರಬೀಳಬೇಕಿದೆ.
ಕೆಲವು ವರದಿಗಳ ಪ್ರಕಾರ, ಶಾರುಖ್ ಖಾನ್ ಹುಟ್ಟುಹಬ್ಬದಂದು ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಲು ಚಿತ್ರತಂಡ ಯೋಜಿಸಿದೆ ಎನ್ನಲಾಗಿದೆ. ಟೀಸರ್‌ನಲ್ಲಿ ಶಾರುಖ್ ಈ ಹಿಂದೆ ಕಾಣಿಸಿಕೊಂಡಿರದ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಆಕರ್ಷಕ ಸಂಭಾಷಣೆಗಳು ಮತ್ತು ಅದ್ಧೂರಿ ದೃಶ್ಯಗಳು ಪ್ರೇಕ್ಷಕರ ಗಮನ ಸೆಳೆಯಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಪಠಾಣ್’, ‘ಜವಾನ್’ ಮೀರಿಸಲಿದೆಯೇ ‘ಕಿಂಗ್’?
‘ಪಠಾಣ್’ ಮತ್ತು ‘ಜವಾನ್’ ಚಿತ್ರಗಳ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ಶಾರುಖ್ ಖಾನ್, ಇದೀಗ ‘ಕಿಂಗ್’ ಚಿತ್ರದ ಮೂಲಕ ಮತ್ತೊಮ್ಮೆ ದೊಡ್ಡ ಮಟ್ಟದ ಆಕ್ಷನ್ ಮನರಂಜನೆ ನೀಡಲು ಸಜ್ಜಾಗಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಚಿತ್ರದ ಆಕ್ಷನ್ ದೃಶ್ಯಗಳು, ರೋಚಕ ಸನ್ನಿವೇಶಗಳು ಹಾಗೂ ಸಂಗೀತಕ್ಕೆ ವಿಶೇಷ ಒತ್ತು ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:
ಟೀಸರ್ ಬಿಡುಗಡೆಯೊಂದಿಗೆ ಚಿತ್ರದ ಜಾಗತಿಕ ಪ್ರಚಾರ ಅಭಿಯಾನಕ್ಕೂ ಚಾಲನೆ ದೊರೆಯುವ ನಿರೀಕ್ಷೆಯಿದೆ. ಕ್ರಿಸ್‌ಮಸ್ ಸಂದರ್ಭದಲ್ಲಿ ಪ್ರೇಕ್ಷಕರಿಗೆ ವಿಭಿನ್ನ ಸಿನಿಮೀಯ ಅನುಭವ ನೀಡುವುದು ಚಿತ್ರತಂಡದ ಗುರಿಯಾಗಿದೆ ಎಂದು ವರದಿಗಳು ತಿಳಿಸಿವೆ.
ತಾರಾಬಳಗದಲ್ಲೂ ದೊಡ್ಡ ಹೆಸರುಗಳು
‘ಕಿಂಗ್’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ಅವರ ಪುತ್ರಿ ಸುಹಾನಾ ಖಾನ್, ರಾಣಿ ಮುಖರ್ಜಿ, ಅಭಿಷೇಕ್ ಬಚ್ಚನ್, ದೀಪಿಕಾ ಪಡುಕೋಣೆ, ಅನಿಲ್ ಕಪೂರ್ ಮತ್ತು ರಾಘವ್ ಜುಯಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ನಟಿ ಕರೀನಾ ಕಪೂರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೂ ವರದಿಯಾಗಿದೆ. ‘ಡ್ಯಾಡಿ ಕೂಲ್’ ಎಂಬ ಹಾಡಿನಲ್ಲಿ ಶಾರುಖ್ ಜೊತೆ ಕರೀನಾ ಕಾಣಿಸಿಕೊಳ್ಳಲಿದ್ದು, ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚಿತ್ರೀಕರಣ ನಡೆಸಲು ಯೋಜಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಮಾರ್ಫ್ಲಿಕ್ಸ್ ನಿರ್ಮಾಣದ ಈ ಚಿತ್ರ ಡಿಸೆಂಬರ್ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.



