October 14, 2026
Wednesday, October 14, 2026
spot_img

ಕೊಡಗಿನ ಕಾಫಿ ತೋಟದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ

ಹೊಸದಿಗಂತ ವರದಿ ಮಡಿಕೇರಿ:

ದಕ್ಷಿಣ ಕೊಡಗಿನ ಕಾಫಿ ತೋಟವೊಂದರಲ್ಲಿ ಬಾಂಗ್ಲಾ ದೇಶದ ವಲಸಿಗರು ಬೀಡು ಬಿಟ್ಟಿರುವುದು ಪತ್ತೆಯಾಗಿದೆ.
ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟಗೇರಿಯ ತೋಟವೊಂದರಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಕಾರ್ಮಿಕರಾಗಿ ಸೇರಿಕೊಂಡಿರುವುದನ್ನು ಪತ್ತೆ ಹಚ್ಚಿರುವ ಹಿಂದೂ ಜಾಗರಣ ವೇದಿಕೆ, ಆಟೋ ಚಾಲಕರ ಸಂಘ ಹಾಗೂ ಸ್ಥಳೀಯ ಹಿಂದೂಪರ ಕಾರ್ಯಕರ್ತರ ತಂಡ, ಆರೋಪಿಗಳನ್ನು ಹಿಡಿದು ಪೊಲೀಸ್ ವಶಕ್ಕೆ ನೀಡಿದೆ.

ಪಶ್ಚಿಮ ಬಂಗಾಳದ ಮಧ್ಯವರ್ತಿಯೊಬ್ಬನ ಮೂಲಕ ತಾವು ಭಾರತಕ್ಕೆ ಬಂದಿರುವುದಾಗಿ ಸ್ವತಃ ವಲಸಿಗರೇ ಬಾಯಿಬಿಟ್ಟಿದ್ದು, ಪೊಲೀಸರು ಸಮಗ್ರ ತನಿಖೆಯ ಮೂಲಕ ಅಕ್ರಮ ನುಸುಳುಕೋರರ ಅಸಲಿಯತ್ತು ಬಯಲಿಗೆಳೆಯಬೇಕಿದೆ. ಈಗಾಗಲೇ ನಾಲ್ವರು ಅಕ್ರಮ ಬಾಂಗ್ಲಾವಲಸಿಗರನ್ನು ವಶಕ್ಕೆ ಪಡೆಯಲಾಗಿದ್ದು, ಇದರಲ್ಲಿ ಗಂಡ ಹೆಂಡತಿ ಹಾಗೂ ಇನ್ನಿಬ್ಬರು ಮಕ್ಕಳು ಸೇರಿದ್ದಾರೆ. ಪತ್ತೆಯಾಗಿರುವ ಅಕ್ರಮ ಬಾಂಗ್ಲಾದೇಶಿಗರ ಬಳಿ ಬೆಂಗಳೂರು ನೋಂದಣಿಯ ದ್ವಿಚಕ್ರ ವಾಹನವೂ ಲಭಿಸಿದೆ.

ಅಕ್ರಮ ಬಾಂಗ್ಲಾದೇಶಿ ವಲಸಿಗರು ಕೊಡಗಿನಲ್ಲಿ ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೊಡಗು ಸುರಕ್ಷಾ ಆಂದೋಲನ ಸಮಿತಿಯ ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್ ಅವರು, ಕೊಡಗಿನಲ್ಲಿ ಬಾಂಗ್ಲಾದೇಶಿ ವಲಸಿಗರು ಅಕ್ರಮವಾಗಿ ನೆಲೆಸಿರುವ ಬಗ್ಗೆ ಹಲವು ವರ್ಷಗಳಿಂದ ಪೊಲೀಸ್ ಇಲಾಖೆಯ ಗಮನಕ್ಕೆ ತರಲಾಗಿದೆ. ಖುದ್ದು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಸೂಕ್ತ ಕ್ರಮ ವಹಿಸುವಂತೆಯೂ ಆಗ್ರಹಿಸಲಾಗಿತ್ತು. ಆದರೆ ಈ ತನಕವೂ ಪೊಲೀಸ್ ಇಲಾಖೆ ಅಕ್ರಮ ಬಾಂಗ್ಲಾದೇಶಿಗರ ಪತ್ತೆಗೆ ಸರಿಯಾದ ಕ್ರಮವಹಿಸದೇ ನಿರ್ಲಕ್ಷ್ಯ ವಹಿಸಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಡಿ.ಸಿ.ಐ.ಬಿ. ಇಂಟೆಲಿಜೆನ್ಸ್ , ಸೈಬರ್ ಕ್ರೈಂ, ಸ್ಪೆಷಲ್ ಬ್ರಾಂಚ್ , ಕ್ರೈಂ ಬ್ರಾಂಚ್ , ವಿಲೇಜ್ ಬೀಟ್…..ಇತ್ಯಾದಿ ಇತ್ಯಾದಿ ವ್ಯವಸ್ಥೆಗಳಿದ್ದರೂ ಸಹ ಬೇರೆ ದೇಶದಿಂದ ನಮ್ಮ ದೇಶದೊಳಗೆ ಅಕ್ರಮವಾಗಿ ಬಂದು ರಾಜಾರೋಷವಾಗಿ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿವೆ. ಪೊಲೀಸ್ ಇಲಾಖೆಯ ವೈಫಲ್ಯದಿಂದಾಗಿಯೇ ದೇಶದ ಆಂತರಿಕ ಸುರಕ್ಷತೆಯು ಗಂಭೀರ ಅಪಾಯದತ್ತ ಸಾಗುತ್ತಿದೆ ಎಂದು ಕುಕ್ಕೇರ ಅಜಿತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಗು ಸುರಕ್ಷಾ ಆಂದೋಲನ ಸಮಿತಿಯು ಈಗಷ್ಟೇ ಜಿಲ್ಲೆಯಲ್ಲಿ 12 ದಿನಗಳ ಕಾಲ ನಿರಂತರ ವಾಹನ ಜಾಥಾ ಮೂಲಕ ಅಕ್ರಮ ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರಗಟ್ಟಲು ಜನಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Must Read