October 14, 2026
Wednesday, October 14, 2026
spot_img

ಸಾಕಷ್ಟು ನಿದ್ದೆ ಮಾಡಿದರೂ ‘ಎನರ್ಜಿ’ ಇಲ್ವಾ? ನಿಮ್ಮ ದೇಹ ಹೇಳ್ತಿರೋ ಈ ಮಾತನ್ನೊಮ್ಮೆ ಕೇಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಿದಿನ ರಾತ್ರಿ ನಿಯಮಿತವಾಗಿ 7 ರಿಂದ 9 ಗಂಟೆಗಳ ಕಾಲ ನಿದ್ರಿಸುವುದು ಆರೋಗ್ಯಕರ ಜೀವನಶೈಲಿಯ ಸಂಕೇತ. ಆದರೆ, ಇಷ್ಟೆಲ್ಲಾ ಸರಿಯಾಗಿ ನಿದ್ರೆ ಮಾಡಿದ ಮೇಲೆಯೂ ಬೆಳಿಗ್ಗೆ ಎದ್ದ ತಕ್ಷಣ ನಿಶಕ್ತಿ, ಆಯಾಸ ಹಾಗೂ ಸುಸ್ತು ಕಾಡುತ್ತಿದ್ಯಾ? ಸಾಕಷ್ಟು ನಿದ್ದೆ ಮಾಡಿದರೂ ನನಗೆ ಯಾಕೆ ಶಕ್ತಿ ಸಿಗುತ್ತಿಲ್ಲ? ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ, ಖಂಡಿತವಾಗಿಯೂ ನಿಮ್ಮ ದೇಹ ನಿಮಗೆ ಏನೋ ಸೂಚನೆ ನೀಡಲು ಪ್ರಯತ್ನಿಸುತ್ತಿದೆ ಎಂದರ್ಥ.

ಡೀಪ್ ಸ್ಲೀಪ್

ಹೆಚ್ಚು ಗಂಟೆಗಳ ಕಾಲ ಮಲಗುವುದು ಮಾತ್ರವಲ್ಲ, ಆ ನಿದ್ರೆ ಎಷ್ಟು ಗಾಢವಾಗಿತ್ತು ಎಂಬುದು ಮುಖ್ಯ. ರಾತ್ರಿ ಪದೇ ಪದೇ ಎಚ್ಚರಗೊಳ್ಳುವುದು, ಕನಸುಗಳು ಹೆಚ್ಚಾಗಿ ಬೀಳುವುದು ಅಥವಾ ನಿದ್ರೆಯಲ್ಲಿ ಸರಿಯಾಗಿ ಉಸಿರಾಟ ನಡೆಯದಿರುವುದು ನಿದ್ರೆಯ ಗುಣಮಟ್ಟವನ್ನು ಹಾಳುಮಾಡುತ್ತದೆ. ಇದರಿಂದ ದೇಹಕ್ಕೆ ವಿಶ್ರಾಂತಿ ಸಿಗದೆ ಆಯಾಸ ಮುಂದುವರಿಯುತ್ತದೆ.

ಪೋಷಕಾಂಶಗಳ ಕೊರತೆ

ದೇಹದಲ್ಲಿ ವಿಟಮಿನ್ ಬಿ12, ವಿಟಮಿನ್ ಡಿ ಹಾಗೂ ಕಬ್ಬಿಣದ ಅಂಶದ ಕೊರತೆಯಿದ್ದರೆ, ಎಷ್ಟು ನಿದ್ರೆ ಮಾಡಿದರೂ ಸುಸ್ತು ಕಡಿಮೆಯಾಗುವುದಿಲ್ಲ. ಹಿಮೋಗ್ಲೋಬಿನ್ ಕಡಿಮೆಯಾದಾಗ ರಕ್ತದಲ್ಲಿ ಆಮ್ಲಜನಕದ ಪೂರೈಕೆ ಸರಿಯಾಗಿ ಆಗದೆ ದೇಹ ಸದಾ ಆಲಸ್ಯದಿಂದ ಕೂಡಿರುತ್ತದೆ.

ಒತ್ತಡ, ಆತಂಕ

ದಿನವಿಡೀ ಕಾಡುವ ಅತಿಯಾದ ಆಲೋಚನೆ, ಒತ್ತಡ ಹಾಗೂ ಖಿನ್ನತೆ ನಮ್ಮ ಶಕ್ತಿಯನ್ನು ಹೀರಿಬಿಡುತ್ತವೆ. ನೀವು ಮಲಗಿದ್ದರೂ ನಿಮ್ಮ ಮೆದುಳು ವಿಶ್ರಾಂತಿ ಪಡೆಯದೆ ಕೆಲಸ ಮಾಡುತ್ತಲೇ ಇದ್ದರೆ, ಬೆಳಿಗ್ಗೆ ಎದ್ದಾಗ ದೇಹ ಲವಲವಿಕೆಯಿಂದ ಇರುವುದಿಲ್ಲ.

ಹಾರ್ಮೋನ್ ಏರುಪೇರು

ದೇಹದ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಥೈರಾಯ್ಡ್ ಗ್ರಂಥಿಯ ಕೆಲಸದಲ್ಲಿ ವ್ಯತ್ಯಾಸವಾದರೆ, ಅತಿಯಾದ ಸುಸ್ತು ಕಾಡುವುದು ಸಾಮಾನ್ಯ. ಹಾರ್ಮೋನ್‌ಗಳ ಏರುಪೇರು ಕೂಡ ದೇಹದ ಶಕ್ತಿಯ ಮಟ್ಟವನ್ನು ಕುಗ್ಗಿಸುತ್ತದೆ.

ಸ್ಕ್ರೀನ್ ಟೈಮ್

ರಾತ್ರಿ ಮಲಗುವ ಮುನ್ನ ಮೊಬೈಲ್, ಟಿವಿ ನೋಡುವುದರಿಂದ ಅದರಿಂದ ಬರುವ ನೀಲಿ ಬೆಳಕು ‘ಮೆಲಟೋನಿನ್’ ಎಂಬ ನಿದ್ರೆಯ ಹಾರ್ಮೋನ್ ಉತ್ಪತ್ತಿಗೆ ಅಡ್ಡಿಪಡಿಸುತ್ತದೆ. ಜೊತೆಗೆ, ದೇಹದಲ್ಲಿ ನೀರಿನಂಶ ಕಡಿಮೆಯಾದರೂ ಆಯಾಸ ಆವರಿಸುತ್ತದೆ.

ನಿರಂತರವಾಗಿ ಈ ರೀತಿ ಆಯಾಸ ಕಾಡುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಮಲಗುವ ಕೋಣೆಯಲ್ಲಿ ಶಾಂತ ವಾತಾವರಣವಿರಲಿ, ಪೌಷ್ಟಿಕ ಆಹಾರ ಸೇವಿಸಿ ಹಾಗೂ ಅಗತ್ಯವಿದ್ದರೆ ಒಮ್ಮೆ ವೈದ್ಯರನ್ನು ಭೇಟಿ ಮಾಡಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

Must Read