ಹೊಸದಿಗಂತ ಡಿಜಿಟಲ್ ಡೆಸ್ಕ್:
ನವರಾತ್ರಿ ಎಂದರೆ ಭಕ್ತಿ, ಶ್ರದ್ಧೆ ಹಾಗೂ ಆಚರಣೆಗಳ ಸಂಭ್ರಮ. ಈ ಒಂಬತ್ತು ದಿನಗಳಲ್ಲಿ ಅನೇಕರು ಉಪವಾಸ ವ್ರತ ಆಚರಿಸುವುದು ಸಾಮಾನ್ಯ.. ಆದರೆ, ಉಪವಾಸ ಎಂದರೆ ಬರಿ ಖಾಲಿ ಹೊಟ್ಟೆಯಲ್ಲಿರುವುದಲ್ಲ. ಬದಲಿಗೆ ದೇಹವನ್ನು ಶುದ್ಧೀಕರಿಸಿ, ಮನಸ್ಸಿಗೆ ಚೈತನ್ಯ ತುಂಬುವ ಪ್ರಕ್ರಿಯೆ. ಸಾಂಪ್ರದಾಯಿಕ ಉಪವಾಸದ ಅಡುಗೆಗಳಿಗೆ ಸ್ವಲ್ಪ ಆಧುನಿಕ ಹಾಗೂ ಆರೋಗ್ಯಕರ ಸ್ಪರ್ಶ ನೀಡಿದರೆ, ಹಬ್ಬದ ಸಂಭ್ರಮದ ಜೊತೆಗೆ ಶಕ್ತಿಯೂ ದ್ವಿಗುಣಗೊಳ್ಳುತ್ತದೆ.
ಎಣ್ಣೆ-ಕರಿದ ಪದಾರ್ಥಗಳಿಗೆ ಗುಡ್ಬೈ ಹೇಳಿ
ಸಾಮಾನ್ಯವಾಗಿ ಉಪವಾಸದ ಸಮಯದಲ್ಲಿ ಸಾಬುದಾನ ವಡೆ, ಆಲೂಗಡ್ಡೆ ಬೋಂಡಾಗಳನ್ನು ಹೆಚ್ಚು ಸೇವಿಸಲಾಗುತ್ತದೆ. ಇವು ಹೊಟ್ಟೆಗೆ ಭಾರವೆನಿಸಿ ಆಲಸ್ಯ ತರಬಹುದು. ಇದರ ಬದಲು ಸಾಬುದಾನ ಕಿಚಡಿ, ಬೇಯಿಸಿದ ಅಥವಾ ಏರ್ಫ್ರೈ ಮಾಡಿದ ಆಲೂಗಡ್ಡೆ ಹಾಗೂ ಬೇಕ್ ಮಾಡಿದ ತಿಂಡಿಗಳನ್ನು ಆಯ್ಕೆ ಮಾಡಿಕೊಳ್ಳಿ. ಇದು ದೇಹಕ್ಕೆ ಅನಗತ್ಯ ಕೊಬ್ಬು ಸೇರದಂತೆ ತಡೆಯುತ್ತದೆ.
ಪೌಷ್ಟಿಕ ಆಹಾರ ಬಳಸಿ
ಉಪವಾಸದ ಅಡುಗೆಯಲ್ಲಿ ಸಿರಿಧಾನ್ಯಗಳನ್ನು ಬಳಸಿ. ರಾಗಿ ಹಿಟ್ಟಿನಿಂದ ಮಾಡಿದ ರೊಟ್ಟಿ, ದೋಸೆಗಳು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತವೆ. ಇವುಗಳಲ್ಲಿ ನಾರಿನಂಶ ಮತ್ತು ಪ್ರೋಟೀನ್ ಹೇರಳವಾಗಿದ್ದು, ದಿನವಿಡೀ ಚಟುವಟಿಕೆಯಿಂದಿರಲು ನೆರವಾಗುತ್ತವೆ.
ಫ್ರೂಟ್ಸ್, ಡ್ರೈ ಫ್ರೂಟ್ಸ್
ಆಹಾರದ ನಡುವೆ ಹಸಿವಾದಾಗ ಕರಿದ ತಿಂಡಿ ತಿನ್ನುವ ಬದಲು ತಾಜಾ ಹಣ್ಣುಗಳು, ಬಾದಾಮಿ, ವಾಲ್ನಟ್ಸ್ ಹಾಗೂ ಒಣದ್ರಾಕ್ಷಿಗಳನ್ನು ಸೇವಿಸಿ. ಇವು ದೇಹಕ್ಕೆ ತಕ್ಷಣದ ಶಕ್ತಿ ನೀಡುತ್ತವೆ. ಸಿಹಿ ತಿನ್ನಿಸುಗಳಲ್ಲಿ ಸಂಸ್ಕರಿಸಿದ ಬಿಳಿ ಸಕ್ಕರೆಯ ಬದಲು ಬೆಲ್ಲ, ಜೇನುತುಪ್ಪ ಅಥವಾ ಖರ್ಜೂರ ಬಳಸುವುದು ಅತ್ಯಂತ ಸೂಕ್ತ.
ದೇಹವನ್ನು ನಿರ್ಜಲೀಕರಣದಿಂದ ಕಾಪಾಡಿ
ಉಪವಾಸದ ಸಮಯದಲ್ಲಿ ನೀರು ಕುಡಿಯುವುದನ್ನು ಮರೆಯಬಾರದು. ದೇಹದಲ್ಲಿ ನೀರಿನಂಶ ಕಾಯ್ದುಕೊಳ್ಳಲು ಎಳನೀರು, ಮಜ್ಜಿಗೆ, ಸೌತೆಕಾಯಿ ಜ್ಯೂಸ್ ಮತ್ತು ತಾಜಾ ಹಣ್ಣಿನ ರಸಗಳನ್ನು ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ, ಆಯಾಸವಾಗದಂತೆ ತಡೆಯುತ್ತದೆ.
ಕಲ್ಲುಪ್ಪು ಬಳಸಿ
ಉಪವಾಸದ ಅಡುಗೆಯಲ್ಲಿ ಸಾಧಾರಣ ಉಪ್ಪಿನ ಬದಲು ಕಲ್ಲುಪ್ಪು ಬಳಸುವುದು ಸಂಪ್ರದಾಯ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಇದು ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಈ ನವರಾತ್ರಿಗೆ ನಿಮ್ಮ ಸಾಂಪ್ರದಾಯಿಕ ವ್ರತದ ಊಟಕ್ಕೆ ಇಂತಹ ಹೆಲ್ದಿ ಟ್ವಿಸ್ಟ್ ನೀಡಿ. ಭಕ್ತಿ, ರುಚಿ ಮತ್ತು ಪೌಷ್ಟಿಕಾಂಶಗಳ ಸಮ್ಮಿಲನದೊಂದಿಗೆ ಹಬ್ಬವನ್ನು ಶಕ್ತಿಯುತವಾಗಿ ಆಚರಿಸಿ.



