ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ನಾಲ್ಕು ದಿನಗಳು ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ ಆರಂಭವಾಗಲಿದ್ದು, ಇಂದು ಮಹೋತ್ಸವಕ್ಕೆ ನಟ ರವಿಚಂದ್ರನ್ ಅವರಿಂದ ಚಾಲನೆ ದೊರೆಯಲಿದೆ.
ಇಂದು ಮಧ್ಯಾಹ್ನ 3ರಿಂದ 3:45ರ ನಡುವಿನ ಶುಭ ಕುಂಭ ಲಗ್ನದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಶ್ರೀರಂಗಪಟ್ಟಣದ ಕಿರಂಗೂರು ಬಳಿಯ ಬನ್ನಿಮಂಟಪದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿದೆ. ಇದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬನ್ನಿ ಪೂಜೆಯ ಮೂಲಕ ದಸರಾ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಈ ಬಾರಿ ಶ್ರೀರಂಗಪಟ್ಟಣದಲ್ಲಿ ಅದ್ಧೂರಿಯಾದ ದಸರಾ ಆಚರಣೆ ನಡೆಯಲಿದ್ದು, ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುತ್ತದೆ. ಬಳಿಕ ಅಂಬಾರಿ ಹೊತ್ತ ಮಹೇಂದ್ರ ಆನೆ ಹೆಜ್ಜೆ ಹಾಕಲಿದ್ದು, ಶ್ರೀರಂಗಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಂಬೂಸವಾರಿ ಮೆರವಣಿಗೆ ಸಾಗಲಿದೆ.
ಜಂಬೂಸವಾರಿಯ ವೇಳೆ ಮೆರವಣಿಗೆಯಲ್ಲಿ ಬ್ಯಾಂಡ್, ವೀರಗಾಸೆ, ಕಂಸಾಳೆ, ಡೊಳ್ಳು ಕುಣಿತ, ಪೂಜಾ ಕುಣಿತ, ಜಡೆ ಕೋಲಾಟ, ಗಾರುಡಿ ಗೊಂಬೆ, ಇನ್ನಿತರ ನೃತ್ಯಗಳು ಪ್ರದರ್ಶನವಾಗಲಿದೆ. ಮೈಸೂರಿನ ದಸರಾ ರೀತಿಯಲ್ಲಿಯೇ ಶ್ರೀರಂಗಪಟ್ಟಣದಲ್ಲಿಯೂ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಚಿವ ಚಲುವರಾಯಸ್ವಾಮಿ, ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ದಸರಾ ಮಹೋತ್ಸವದ ಅಂಗವಾಗಿ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಶ್ರೀರಂಗನಾಥಸ್ವಾಮಿ ದೇವಾಲಯದ ಸಮೀಪ ನಿರ್ಮಿಸಿರುವ ವೇದಿಕೆಯಲ್ಲಿ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ.



