October 15, 2026
Thursday, October 15, 2026
spot_img

ಬಾಕ್ಸ್‌ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಬರ್ತಿದ್ದಾರೆ ಸೌತ್‌ ಸಿನಿಮಾದ ಇಬ್ಬರು ಮಹಾನಟರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ನಿರೀಕ್ಷಿತ ಮತ್ತು ಅಭೂತಪೂರ್ವ ಒಪ್ಪಂದವೊಂದು ತೆರೆಮರೆಯಲ್ಲಿ ಸಿದ್ಧವಾಗಿದೆ. ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ಮತ್ತು ಮಲಯಾಳಂ ಸಿನಿರಂಗದ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರು ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘OM: Chapter 1: Udhiram – The Blood Wood’ ಎಂಬ ಈ ಮಹತ್ವಾಕಾಂಕ್ಷೆಯ ಚಿತ್ರವು ಭಾಷೆ ಮತ್ತು ಪ್ರಾದೇಶಿಕ ಗಡಿಗಳನ್ನು ಮೀರಿ ನಿಂತು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿ ಸಂಚಲನ ಮೂಡಿಸಲು ಸಜ್ಜಾಗಿದೆ.

ಈ ಬೃಹತ್ ಯೋಜನೆ ಸಾಕಾರಗೊಳ್ಳುವುದರ ಹಿಂದೆ ‘ಆರ್.ಟೇಕ್ ಸ್ಟುಡಿಯೋಸ್’ ಸಂಸ್ಥೆಯ ಸಂಸ್ಥಾಪಕಿ ಶ್ರದ್ಧಾ ಅಗರ್ವಾಲ್ ಅವರ ದೂರದೃಷ್ಟಿ ಮುಖ್ಯ ಪಾತ್ರ ವಹಿಸಿದೆ. ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ಈ ನಿರ್ಮಾಪಕಿ, ಭಾರತೀಯ ಚಿತ್ರರಂಗದ ದಿಗ್ಗಜರನ್ನು ಒಂದೇ ವೇದಿಕೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ವಿವಿಧ ಭಾಷೆಯ ಕಲಾವಿದರು ಹಾಗೂ ತಂತ್ರಜ್ಞರನ್ನು ಒಗ್ಗೂಡಿಸಿ, ಪ್ರೇಕ್ಷಕರಿಗೆ ದೃಶ್ಯ ವೈಭವವನ್ನು ಉಣಬಡಿಸುವುದು ತಮ್ಮ ಮುಖ್ಯ ಉದ್ದೇಶ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎರಡು ಪ್ರತ್ಯೇಕ ದೊಡ್ಡ ಪರಂಪರೆಗಳನ್ನು ಹೊಂದಿರುವ ನಟರು ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿರುವುದು ಸಿನಿಪ್ರಿಯರಲ್ಲಿ ರೋಚಕತೆಯನ್ನು ಇಮ್ಮಡಿಗೊಳಿಸಿದೆ. ಕೇವಲ ನಟರಷ್ಟೇ ಅಲ್ಲದೆ, ಚಿತ್ರದ ಮೇಕಿಂಗ್, ಕಥಾಹಂದರ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

‘ಆರ್.ಟೇಕ್ ಸ್ಟುಡಿಯೋಸ್’ ಹಾಗೂ ‘ವಂಡರ್‌ಬಾರ್ ಫಿಲ್ಮ್ಸ್’ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರವು ಕೇವಲ ಮನೋರಂಜನೆ ನೀಡುವುದಷ್ಟೇ ಅಲ್ಲದೆ, ಒಟ್ಟಾರೆ ಭಾರತೀಯ ಸಿನಿರಂಗವನ್ನು ಜಾಗತಿಕ ಮಟ್ಟಕ್ಕೇರಿಸುವ ಭರವಸೆ ನೀಡಿದೆ.

Must Read