ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿ ವರುಷ ಅಕ್ಟೋಬರ್ 15ರಂದು ಭಾರತದಾದ್ಯಂತ ಅತ್ಯಂತ ಗೌರವ ಹಾಗೂ ಪ್ರೀತಿಯಿಂದ ಆಚರಿಸಲಾಗುವ ದಿನವೇ ‘ಭಾರತ ರತ್ನ’ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನ. ಈ ದಿನವನ್ನು ಕೇವಲ ಒಬ್ಬ ವ್ಯಕ್ತಿಯ ಹುಟ್ಟುಹಬ್ಬವಾಗಿ ಆಚರಿಸದೆ, ವಿಶ್ವಸಂಸ್ಥೆ ಮತ್ತು ಜಗತ್ತಿನಾದ್ಯಂತ ‘ವಿಶ್ವ ವಿದ್ಯಾರ್ಥಿಗಳ ದಿನ’ ಎಂದೇ ಗೌರವಿಸಲಾಗುತ್ತದೆ. ಅತ್ಯಂತ ಬಡತನದಲ್ಲಿ ಹುಟ್ಟಿ, ಸ್ವಪ್ರಯತ್ನದಿಂದ ದೇಶದ ಅತ್ಯುನ್ನತ ‘ರಾಷ್ಟ್ರಪತಿ’ ಹುದ್ದೆಗೇರಿದರೂ, ಕೊನೆ ತನಕ ಅತಿಯಾದ ಸರಳತೆ ಮತ್ತು ವಿನಯವನ್ನೇ ಉಸಿರಾಡಿದ ಮಹಾನ್ ಚೇತನ ಅಬ್ದುಲ್ ಕಲಾಂ.
ಕಲಾಂ ಸ್ಫೂರ್ತಿದಾಯಕ ಬಾಲ್ಯ
ತಮಿಳುನಾಡಿನ ರಾಮೇಶ್ವರಂನಲ್ಲಿ ಅತ್ಯಂತ ಸಾಮಾನ್ಯ ಹಾಗೂ ಬಡ ಮೀನುಗಾರ ಕುಟುಂಬದಲ್ಲಿ ಜನಿಸಿದ ಕಲಾಂ ಅವರ ಬಾಲ್ಯ ಕಷ್ಟಗಳಿಂದ ಕೂಡಿತ್ತು. ತಮ್ಮ ಓದಿನ ಖರ್ಚಿಗಾಗಿ ಸಣ್ಣ ವಯಸ್ಸಿನಲ್ಲೇ ದಿನಪತ್ರಿಕೆಗಳನ್ನು ಹಂಚುವ ಕೆಲಸ ಮಾಡಿ, ಸ್ವಾವಲಂಬನೆಯ ಪಾಠ ಕಲಿತರು. ಕಷ್ಟಗಳು ಬಂದಾಗ ಕುಗ್ಗದೆ, ತನ್ನ ಪರಿಶ್ರಮ ಮತ್ತು ಛಲದಿಂದ ಭೌತಶಾಸ್ತ್ರ ಮತ್ತು ಏರೋನಾಟಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದರು. ಡಿಆರ್ಡಿಒ ಮತ್ತು ಇಸ್ರೋ ಸಂಸ್ಥೆಗಳಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ, ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ತಂತ್ರಜ್ಞಾನಕ್ಕೆ ಬುನಾದಿ ಹಾಕಿದರು.
ಭಾರತದ ‘ಮಿಸೈಲ್ ಮ್ಯಾನ್’
ದೇಶದ ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಡಾ. ಕಲಾಂ ಅವರ ಪಾತ್ರ ದೊಡದು. ಅಗ್ನಿ ಮತ್ತು ಪೃಥ್ವಿಯಂತಹ ಕ್ಷಿಪಣಿಗಳ ಯಶಸ್ವಿ ನಿರ್ಮಾಣದ ಹಿಂದೆ ಇವರ ಪರಿಶ್ರಮವಿತ್ತು. ಇದರಿಂದಾಗಿ ಇವರನ್ನು ಭಾರತದ ‘ಮಿಸೈಲ್ ಮ್ಯಾನ್’ ಎಂದೇ ಕರೆಯಲಾಗುತ್ತದೆ. 1998ರ ಪೋಖ್ರಾಣ್ ಪರಮಾಣು ಪರೀಕ್ಷೆಯ ಯಶಸ್ಸಿನಲ್ಲೂ ಅವರು ಪ್ರಮುಖ ಪಾತ್ರ ವಹಿಸಿ, ಜಾಗತಿಕ ಮಟ್ಟದಲ್ಲಿ ಭಾರತದ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ವಿಜ್ಞಾನ ಕ್ಷೇತ್ರದಲ್ಲಿ ಅವರು ನೀಡಿದ ಈ ಅಮೋಘ ಕೊಡುಗೆಯು ದೇಶದ ಸುರಕ್ಷತೆಗೆ ಮಹಾ ರಕ್ಷಣಾ ಕವಚವಾಯಿತು.
ರಾಷ್ಟ್ರಪತಿ ಹಾಗೂ ಪ್ರೀತಿಯ ಶಿಕ್ಷಕ
2002ರಲ್ಲಿ ಭಾರತದ 11ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಕಲಾಂ, ಅದ್ಧೂರಿತನಕ್ಕೆ ಹೆಸರಾಗಿದ್ದ ರಾಷ್ಟ್ರಪತಿ ಭವನದ ಬಾಗಿಲನ್ನು ಸಾಮಾನ್ಯ ಜನರಿಗಾಗಿ ತೆರೆದಿಟ್ಟರು. ಅದಕ್ಕಾಗಿಯೇ ಅವರನ್ನು ‘ಜನರ ರಾಷ್ಟ್ರಪತಿ’ ಎಂದು ಇಂದಿಗೂ ಪ್ರೀತಿಯಿಂದ ನೆನಪಿಸಿಕೊಳ್ಳಲಾಗುತ್ತದೆ. ಆದರೆ, ಅವರಿಗೆ ಅತ್ಯಂತ ಇಷ್ಟವಾದ ಹುದ್ದೆ ಎಂದರೆ ಅದು ‘ಶಿಕ್ಷಕ’. “ನನ್ನನ್ನು ಒಬ್ಬ ಶಿಕ್ಷಕನಾಗಿ ನೆನಪಿಟ್ಟುಕೊಂಡರೆ ಅದೇ ನನಗೆ ಸಿಗುವ ದೊಡ್ಡ ಗೌರವ” ಎಂದು ಅವರು ಹೆಮ್ಮೆಯಿಂದ ಹೇಳುತ್ತಿದ್ದರು. ಬೋಧನೆ ಮತ್ತು ಬರವಣಿಗೆಯ ಮೂಲಕ ಯುವ ಸಮುದಾಯದ ಜೊತೆ ಬೆರೆತರು. ಕೊನೆಯುಸಿರೆಳೆಯುವ ತನಕವೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ, ಅವರಿಗೆ ಜ್ಞಾನದ ದಾರಿ ತೋರುತ್ತಿದ್ದರು.
ಯುವಜನತೆಗೆ ಕರೆ
ಕಲಾಂ ಅವರು ದೇಶದ ಯುವಜನತೆಗೆ ನೀಡಿದ ಅತ್ಯಂತ ಪ್ರಸಿದ್ಧ ಸಂದೇಶವೆಂದರೆ “ಕನಸು ಅಂದರೆ ನೀವು ನಿದ್ದೆಯಲ್ಲಿ ಕಾಣುವುದಲ್ಲ, ನಿಮ್ಮನ್ನು ನಿದ್ದೆ ಮಾಡಲು ಬಿಡದಿರುವುದೇ ನಿಜವಾದ ಕನಸು.” ಯುವಕರಲ್ಲೇ ದೇಶವನ್ನು ಬದಲಾಯಿಸುವ ಅದ್ಭುತ ಶಕ್ತಿಯಿದೆ ಎಂದು ಅವರು ದೃಢವಾಗಿ ನಂಬಿದ್ದರು. ಅವರ ಪ್ರಸಿದ್ಧ ಪುಸ್ತಕಗಳಾದ ‘ವಿಂಗ್ಸ್ ಆಫ್ ಫೈಯರ್’ ಮತ್ತು ‘ಇಂಡಿಯಾ 2020’ ಪ್ರತಿಯೊಬ್ಬ ಭಾರತೀಯನಲ್ಲೂ ದೇಶಪ್ರೇಮ ಹಾಗೂ ಆತ್ಮವಿಶ್ವಾಸವನ್ನು ತುಂಬುವಂತಹ ಅದ್ಭುತ ಕೃತಿಗಳಾಗಿವೆ.
ಅಬ್ದುಲ್ ಕಲಾಂ ಪರಂಪರೆ
ಡಾ. ಕಲಾಂ ಅವರ ಬದುಕು ನಮಗೆ ಕಲಿಸುವ ದೊಡ್ಡ ಪಾಠವೆಂದರೆ, ವ್ಯಕ್ತಿಯೊಬ್ಬ ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಮೂಲವನ್ನು ಮರೆಯಬಾರದು, ಸರಳತೆಯನ್ನು ಬಿಡಬಾರದು. ಇಂದು ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವವೆಂದರೆ, ಅವರು ತೋರಿದ ಸತ್ಯ, ಪ್ರಾಮಾಣಿಕತೆ, ದೇಶಪ್ರೇಮ ಮತ್ತು ಅಡೆತಡೆಗಳನ್ನು ಮೆಟ್ಟಿ ನಿಲ್ಲುವ ಹಾದಿಯಲ್ಲಿ ನಡೆಯುವುದು.
ಡಾ. ಅಬ್ದುಲ್ ಕಲಾಂ ಅವರು ಭೌತಿಕವಾಗಿ ನಮ್ಮೊಂದಿಗಿಲ್ಲದಿರಬಹುದು, ಆದರೆ ಅವರ ವಿಚಾರಗಳು, ನುಡಿಗಳು ಮತ್ತು ದೇಶಕ್ಕಾಗಿ ಅವರು ನೀಡಿದ ಕೊಡುಗೆಗಳು ಕೋಟ್ಯಂತರ ಭಾರತೀಯರ ಮನಸ್ಸಿನಲ್ಲಿ ಎಂದೆಂದಿಗೂ ಅಮರ.



