ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ರಾಮಾಯಣದ ಕಥೆ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಹೊಸ ರೂಪದಲ್ಲಿ ಮೂಡಿಬರಲು ಸಜ್ಜಾಗಿದೆ.
ನಿರ್ದೇಶಕ ನಿತೀಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಮಹತ್ವಾಕಾಂಕ್ಷೆಯ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದ ಹೊಸ ಟ್ರೈಲರ್ ಬಿಡುಗಡೆಯಾಗಿದ್ದು, ಅದ್ಧೂರಿ ದೃಶ್ಯಗಳು, ರೋಚಕ ಯುದ್ಧದ ಸನ್ನಿವೇಶಗಳು ಮತ್ತು ಭಾವನಾತ್ಮಕ ಕ್ಷಣಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ. ವಿಶೇಷವಾಗಿ ರಾವಣನ ಪಾತ್ರದಲ್ಲಿ ಯಶ್ ಅಬ್ಬರದ ನೋಟ ಹಾಗೂ ರಾಮನಾಗಿ ರಣಬೀರ್ ಕಪೂರ್ ಶಾಂತವಾದರೂ ಪ್ರಭಾವಶಾಲಿ ವ್ಯಕ್ತಿತ್ವ ಟ್ರೈಲರ್ನ ಪ್ರಮುಖ ಆಕರ್ಷಣೆಯಾಗಿವೆ.
ಇಂದು ಎರಡು ವಿಭಿನ್ನ ಟ್ರೈಲರ್ಗೆ ಬಿಡುಗಡೆಯಾಗಿದ್ದು, ಜಾಗತಿಕ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿರುವ ಅಂತಾರಾಷ್ಟ್ರೀಯ ಟ್ರೈಲರ್ನಲ್ಲಿ ಆಕ್ಷನ್ ಮತ್ತು ಯುದ್ಧದ ದೃಶ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಭಾರತೀಯ ಪ್ರೇಕ್ಷಕರಿಗಾಗಿ ಬಿಡುಗಡೆಯಾದ ಟ್ರೈಲರ್ನಲ್ಲಿ ಭಕ್ತಿ, ಭಾವನೆ ಮತ್ತು ರಾಮ–ಸೀತೆಯ ನಡುವಿನ ಬಾಂಧವ್ಯಕ್ಕೂ ಪ್ರಾಮುಖ್ಯತೆ ನೀಡಲಾಗಿದೆ ಎಂದು ವರದಿಯಾಗಿದೆ. ಹೀಗಾಗಿ, ಕೇವಲ ಯುದ್ಧದ ಕಥೆಯಷ್ಟೇ ಅಲ್ಲದೆ, ಪ್ರೀತಿ, ಧರ್ಮ ಮತ್ತು ಕರ್ತವ್ಯದ ಸಂಘರ್ಷವನ್ನೂ ಸಿನಿಮಾ ಒಳಗೊಂಡಿರುವ ಸುಳಿವು ಸಿಕ್ಕಿದೆ.
ಇಬ್ಬರ ಪಾತ್ರಗಳು ವಿಭಿನ್ನ
ಟ್ರೈಲರ್ನಲ್ಲಿ ಅಗ್ನಿ ಮತ್ತು ಆಕ್ರೋಶದ ಸಂಕೇತವಾಗಿ ರಾವಣನನ್ನು ಪರಿಚಯಿಸಲಾಗಿದ್ದು, ದೇವತೆಗಳನ್ನೇ ತನ್ನ ಇಚ್ಛೆಗೆ ತಲೆಬಾಗಿಸಿದ ಶಕ್ತಿಶಾಲಿ ಪಾತ್ರವಾಗಿ ಯಶ್ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ, ಅಧರ್ಮದ ಅಂಧಕಾರವನ್ನು ದೂರಮಾಡಲು ಸಂಕಲ್ಪ ತೊಟ್ಟ ರಾಮನಾಗಿ ರಣಬೀರ್ ಕಪೂರ್ ಗಮನ ಸೆಳೆಯುತ್ತಾರೆ.
ಇನ್ನೂ ಕೆಲವು ಪಾತ್ರಗಳು ನೋಡೋಕೆ ಬಾಕಿ ಇದೆ
ರಾಮ ಮತ್ತು ಸೀತೆಯ ಸಂಬಂಧದ ಭಾವನಾತ್ಮಕ ಕ್ಷಣಗಳ ಜೊತೆಗೆ, ರಾವಣನ ವಿರುದ್ಧ ಹೋರಾಡುವ ಪುಷ್ಪಕ ವಿಮಾನ ಹಾಗೂ ಜಟಾಯುವಿನ ದೃಶ್ಯಗಳೂ ಟ್ರೈಲರ್ನಲ್ಲಿ ಕಾಣಿಸಿಕೊಳ್ಳುತ್ತವೆ. ಬೃಹತ್ ಸೆಟ್ಗಳು, ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು ತಾಂತ್ರಿಕ ವಿನ್ಯಾಸ ಚಿತ್ರಕ್ಕೆ ಭವ್ಯತೆಯ ಸ್ಪರ್ಶ ನೀಡಿವೆ. ಆದರೆ ಹನುಮಂತ ಸೇರಿದಂತೆ ಕೆಲವು ಪ್ರಮುಖ ಪಾತ್ರಗಳ ಸಂಪೂರ್ಣ ನೋಟವನ್ನು ನಿರ್ಮಾಪಕರು ಇನ್ನೂ ಬಹಿರಂಗಪಡಿಸಿಲ್ಲ ಎಂಬ ಕುತೂಹಲವೂ ಉಳಿದಿದೆ.
ಬಹು ತಾರಾಗಣ
ನಿತೀಶ್ ತಿವಾರಿ ನಿರ್ದೇಶನದ ಈ ಎರಡು ಭಾಗಗಳ ಮಹಾಕಾವ್ಯದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸಿದ್ದಾರೆ. ಮೊದಲ ಭಾಗವು ನವೆಂಬರ್ 5ರಂದು ವಿಶ್ವದಾದ್ಯಂತ ಚಿತ್ರಮಂದಿರಗಳು, ಐಮ್ಯಾಕ್ಸ್ ಹಾಗೂ ಪ್ರೀಮಿಯಂಗಳಲ್ಲಿ ಬಿಡುಗಡೆಯಾಗಲಿದೆ. ಎರಡನೇ ಭಾಗವನ್ನು 2027ರ ದೀಪಾವಳಿಗೆ ಬಿಡುಗಡೆ ಮಾಡುವ ಯೋಜನೆಯಿದೆ.



