October 15, 2026
Thursday, October 15, 2026
spot_img

ಟ್ರಂಪ್ ಮನವಿಗೆ ಕ್ಯಾರೇ ಎನ್ನದ ಝೆಲೆನ್ಸ್ಕಿ: ರಷ್ಯಾದ ತೈಲ ಸಂಸ್ಕರಣಾಗಾರಗಳೇ ಉಕ್ರೇನ್‌ನ ಮುಂದಿನ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ–ಉಕ್ರೇನ್ ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಸೂಚನೆಗಳು ಕಾಣಿಸುತ್ತಿವೆ. ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲೆ ಮತ್ತೆ ದಾಳಿ ನಡೆಸಲು ಉಕ್ರೇನ್ ಸಿದ್ಧತೆ ನಡೆಸುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದಾಳಿ ನಿಲ್ಲಿಸುವ ಮನವಿಗೆ ಮಣಿಯುವುದಿಲ್ಲ ಎಂಬ ಸಂದೇಶವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನೀಡಿದ್ದಾರೆ.

“ಸಾಕು, ಇನ್ನು ಸಹಿಸುವುದಿಲ್ಲ” ಎಂದು ಹೇಳಿರುವ ಅವರು, ರಷ್ಯಾದ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಯಾವಾಗ ಪುನರಾರಂಭಿಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಅಮೆರಿಕ ಇಂಧನ ವ್ಯಾಪಾರ ಟೀಕಿಸಿದ ಝೆಲೆನ್ಸ್ಕಿ

ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಝೆಲೆನ್ಸ್ಕಿ, ಉಕ್ರೇನ್ ಮೇಲೆ ದಾಳಿ ಮುಂದುವರಿಸುತ್ತಿರುವ ರಷ್ಯಾದೊಂದಿಗೆ ಅಮೆರಿಕ ಇಂಧನ ವ್ಯಾಪಾರ ನಡೆಸುತ್ತಿರುವುದನ್ನು ಟೀಕಿಸಿದ್ದಾರೆ. ರಷ್ಯಾದಿಂದ ಡೀಸೆಲ್ ಖರೀದಿಸುವುದರಿಂದ ಮಾಸ್ಕೋಗೆ ಯುದ್ಧ ಮುಂದುವರಿಸಲು ಅಗತ್ಯವಾದ ಹಣಕಾಸು ದೊರೆಯುತ್ತದೆ ಎಂಬುದು ಅವರ ವಾದ. ಯುದ್ಧದಲ್ಲಿ ಉಕ್ರೇನಿಯನ್ನರು ಪ್ರಾಣ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ರಷ್ಯಾದ ಇಂಧನ ವ್ಯಾಪಾರಕ್ಕೆ ಅವಕಾಶ ನೀಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

ಟ್ರಂಪ್ ಮನವಿ

ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ನಿಲ್ಲಿಸುವಂತೆ ಟ್ರಂಪ್ ಎರಡೂ ದೇಶಗಳಿಗೆ ಮನವಿ ಮಾಡಿದ್ದರು. ತಾವು ಅಮೆರಿಕದ ಮನವಿಗೆ ಸ್ಪಂದಿಸಿ ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲಿನ ದಾಳಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾಗಿ ಕೀವ್ ಹೇಳಿದೆ. ಆದರೆ ರಷ್ಯಾ ತನ್ನ ವಿದ್ಯುತ್ ಉತ್ಪಾದನಾ ಘಟಕಗಳು ಮತ್ತು ಇಂಧನ ವ್ಯವಸ್ಥೆಗಳ ಮೇಲೆ ದಾಳಿ ಮುಂದುವರಿಸಿದೆ ಎಂದು ಉಕ್ರೇನ್ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ, ಉಕ್ರೇನ್ ರಷ್ಯಾದ ಸಂಸ್ಕರಣಾಗಾರಗಳ ಮೇಲಿನ ದಾಳಿಯನ್ನು ನಿಲ್ಲಿಸಿಯೇ ಇಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.

ಅಮೆರಿಕ-ಉಕ್ರೇನ್ ನಡುವೆ ಬಿರುಕು

ಇನ್ನೊಂದೆಡೆ, ಅಮೆರಿಕದೊಂದಿಗೆ ಉಕ್ರೇನ್ ಹೊಂದಿರುವ ಸಂಬಂಧದಲ್ಲೂ ಬಿರುಕು ಮೂಡುತ್ತಿರುವ ಲಕ್ಷಣಗಳು ಗೋಚರಿಸಿವೆ. ಅಮೆರಿಕದ ಬೆಂಬಲ ಕುಗ್ಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಝೆಲೆನ್ಸ್ಕಿ, “ನಾವು ಅಮೆರಿಕದಂತಹ ಬಲಿಷ್ಠ ಪಾಲುದಾರನನ್ನು ಕಳೆದುಕೊಳ್ಳುತ್ತಿದ್ದೇವೆ” ಎಂದು ಹೇಳಿದ್ದಾರೆ. ಆದರೆ ಉಕ್ರೇನ್‌ಗೆ ಗುಪ್ತಚರ ಮಾಹಿತಿ ಹಂಚಿಕೆಯನ್ನು ಕಡಿಮೆ ಮಾಡಲಾಗಿದೆ ಎಂಬ ಆರೋಪವನ್ನು ಅಮೆರಿಕದ ಅಧಿಕಾರಿಗಳು ನಿರಾಕರಿಸಿದ್ದಾರೆ.

ಈ ನಡುವೆ, ರಷ್ಯಾದ ರ್ಯಾಜಾನ್ ಪ್ರದೇಶದಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ಗುರುವಾರ ಡ್ರೋನ್ ದಾಳಿ ನಡೆದಿದ್ದು, ಬೆಂಕಿ ಕಾಣಿಸಿಕೊಂಡಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಹಾನಿಯ ಸಂಪೂರ್ಣ ಪ್ರಮಾಣ ಇನ್ನೂ ಸ್ಪಷ್ಟವಾಗಿಲ್ಲ.

Must Read