October 16, 2026
Friday, October 16, 2026
spot_img

ಋತುಬಂಧ ಕಾಯಿಲೆಯಲ್ಲ, ಸಹಜ ಪ್ರಕ್ರಿಯೆ: ಮಹಿಳೆಯರು ತಿಳಿಯಲೇಬೇಕಾದ ವಿಷಯಗಳಿವು!

ಋತುಬಂಧವು ( Menopause) ಮಹಿಳೆಯ ಜೀವನದ ಸಹಜ ಹಂತ. ಸಾಮಾನ್ಯವಾಗಿ 45ರಿಂದ 55 ವರ್ಷಗಳು ನಡುವೆ ಮಾಸಿಕ ಋತುಸ್ರಾವವು ಶಾಶ್ವತವಾಗಿ ನಿಲ್ಲುತ್ತದೆ. ಸತತ 12 ತಿಂಗಳುಗಳ ಕಾಲ ಮಾಸಿಕ ಸ್ರಾವವು ಕಂಡುಬರದಿದ್ದಲ್ಲಿ ಋತುಬಂಧವೆನ್ನುತ್ತೇವೆ. ಈ ಸಂದರ್ಭವನ್ನು ಕೆಲವರು ಆತಂಕದಿಂದ ಎದುರಿಸಿದರೆ, ಇನ್ನು ಕೆಲವರು ತಮ್ಮ ತೊಂದರೆಗಳನ್ನು ಗುಟ್ಟಾಗಿ ಮುಚ್ಚಿಡುತ್ತಾರೆ. ಋತುಬಂಧದ ಬಗ್ಗೆ ಮಹಿಳೆಯರಿಗೆ ಇರುವ ಕೆಲವು ತಪ್ಪು ಕಲ್ಪನೆಗಳು, ಅದರ ವಾಸ್ತವ ಸ್ಥಿತಿ ಏನು ಎನ್ನುವ ಬಗ್ಗೆ ಡಾ. ಪವಿತ್ರಾ ಪೈ ಮಾಹಿತಿ ನೀಡಿದ್ದಾರೆ.

ತಪ್ಪು ಕಲ್ಪನೆ:

1) ಋತುಬಂಧವು ಒಂದು ಕಾಯಿಲೆ
ವಾಸ್ತವ : ಇದು ಸಹಜ ಜೈವಿಕ ಪ್ರಕ್ರಿಯೆ. ಈಸ್ಟ್ರೋಜನ್ ಹಾರ್ಮೋನ್ ಕೊರತೆಯಿಂದ ಕೆಲವು ದೈಹಿಕ ಹಾಗೂ ಮಾನಸಿಕ ಅಸ್ವಸ್ಥತೆಗಳು ಕಾಣಿಸಿಕೊಳ್ಳಬಹುದು. ಈ ಲಕ್ಷಣಗಳು ತೀವ್ರವಾಗಿದ್ದರೆ ಅಥವಾ ದೈನಂದಿನ ಕೆಲಸಕ್ಕೆ ಅಡ್ಡಿಯಾದರೆ, ಸ್ವಯಂ ಜೌಷಧಿ ತೆಗೆದುಕೊಳ್ಳದೆ ವೈದ್ಯರನ್ನು ಸಂಪರ್ಕಿಸಿ.

2) ಎಲ್ಲರಿಗೂ ಒಂದೇ ರೀತಿಯ ಲಕ್ಷಣಗಳು
ವಾಸ್ತವ : ಋತುಬಂಧದ ಅನುಭವ ಪ್ರತಿಯೊಬ್ಬರಲ್ಲೂ ಭಿನ್ನವಾಗಿರುತ್ತದೆ. ಕೆಲವರಿಗೆ ಬಿಸಿ ಅಲೆಗಳು, ರಾತ್ರಿ ಬೆವರುವುದು, ನಿದ್ರೆ ಸಮಸ್ಯೆ ಕಾಣಿಸಿಕೊಳ್ಳಬಹುದು. ಇನ್ನು ಕೆಲವರಲ್ಲಿ ಆತಂಕ, ಮನನೊಂದುಕೊಳ್ಳುವುದು, ಕಾಲಿನ ಗಂಟುನೋವು, ಅತಿಯಾದ ದುಃಖ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು.

3) ಋತುಬಂಧದ ನಂತರ ಮಹಿಳೆ ದುರ್ಬಲಳಾಗುತ್ತಾಳೆ
ವಾಸ್ತವ : ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮ ಹಾಗೂ ಪ್ರಾಣಯಾಮವನ್ನು ಪಾಲಿಸುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ರಕ್ಷಿಸಬಹುದು. ಮೂಳೆಗಳ ಆರೋಗ್ಯಕ್ಕಾಗಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿತ್ರೀ ಅವಶ್ಯಕವಾಗಿರುತ್ತವೆ. ಯಾವುದೇ ಪೂರಕವನ್ನು ವೈದ್ಯರ ಸಲಹೆ ಇಲ್ಲದೆ ಆರಂಭಿಸಬಾರದು.

4) ಲೈಂಗಿಕ ಜೀವನಕ್ಕೆ ಪೂರ್ಣ ವಿರಾಮ
ವಾಸ್ತವ : ಋತುಬಂಧದ ನಂತರವೂ ಆರೋಗ್ಯಕರ ಲೈಂಗಿಕ ಜೀವನ ಸಾಧ್ಯವಾಗಿರುತ್ತದೆ. ಯೋನಿಯ ಶುಶ್ಕತೆ ಅಥವಾ ಅಸ್ವಸ್ಥತೆಗೆ ಈಸ್ಟ್ರೋಜನ್ ಪೂರಕವಾಗಿರುವಂತಹ ಔಷಧ ಹಾಗೂ ಆಯುರ್ವೇದದಲ್ಲಿ ತಿಳಿಸಿರುವಂತಹ ಯೋನಿ ಪಿಚು ಮುಂತಾದ ಸ್ಥಾನಿಕ ಚಿಕಿತ್ಸೆಯನ್ನು ನೀಡಬಹುದು. ನೋವು, ರಕ್ತಸ್ರಾವ ಪುನರಾವರ್ತಿತ ಮೂತ್ರದಸೋಂಕು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.

5) ಋತುಬಂಧಕ್ಕೆ ಚಿಕಿತ್ಸೆ ಇಲ್ಲ
ವಾಸ್ತವ : ಹಲವು ಲಕ್ಷಣಗಳನ್ನು ನಿಯಂತ್ರಿಸಲು ಪರಿಣಾಮಕಾರಿ ಮಾರ್ಗಗಳಿವೆ. ಹಾರ್ಮೋನು ಚಿಕಿತ್ಸೆಯು ಕೆಲವರಿಗೆ ಸೂಕ್ತವಾಗಬಹುದು. ಆಯುರ್ವೇದದಲ್ಲಿ ತಿಳಿಸಿರುವಂತಹ ಶಿರೋಧಾರ, ವಿರೇಚನ, ಬಸ್ತಿ, ಶಿರೋ ಪಿಚು ಮುಂತಾದ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಿಕೊಂಡು ಲಕ್ಷಣಗಳಿಗೆ ಪರಿಹಾರವನ್ನು ಒದಗಿಸಬಹುದು.

6) ಋತುಬಂಧದ ನಂತರ ರಕ್ತಸ್ರಾವ/ಅಸಹಜ ಯೋನಿಸ್ರಾವವು ಸಹಜ ಇದಕ್ಕೆ ವೈದ್ಯರ ತಪಾಸಣೆಯ ಅವಶ್ಯಕತೆಯಿಲ್ಲ. ಮನೆಯ ಪೂರ್ವಜರಲ್ಲಿ ಇದೇ ರೀತಿ ಲಕ್ಷಣಗಳಿದ್ದು, ಅವರಿಗೆ ಯಾವುದೇ ತರಹದ ಅಡ್ಡಪರಿಣಾಮಗಳಾಗಿಲ್ಲ.
ವಾಸ್ತವ : ಋತುಬಂಧದ ನಂತರದ ರಕ್ತಸ್ರಾವ, ಯೋನಿಸ್ರಾವವು ಸಹಜವಲ್ಲ. ಕ್ಯಾನ್ಸರ್ ಮುಂತಾದ ರೋಗದ ಲಕ್ಷಣವಾಗಿರುತ್ತದೆ. ಇಂತಹ ಲಕ್ಷಣಗಳಿದ್ದರೆ ನಿರ್ಲಕ್ಷ ಮಾಡದೆ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆಯಬೇಕು.

ನಿಯಮಿತವಾಗಿ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ, ಮೂಳೆಗಳ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣೆಗಳ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿ. ಋತುಬಂಧವು ಜೀವನದ ಅಂತ್ಯವಲ್ಲ. ಸರಿಯಾದ ಮಾಹಿತಿ ಕುಟುಂಬದ ಬೆಂಬಲ ಮತ್ತು ಅಗತ್ಯ ವೈದ್ಯಕೀಯ ಆರೈಕೆ, ಮಾನಸಿಕ ಸ್ವಾಸ್ಥತೆಯಿಂದ ಈ ಹಂತವನ್ನು ಆತ್ಮವಿಶ್ವಾಸದಿಂದ ಎದುರಿಸಬಹುದು.

  • ಡಾ. ಪವಿತ್ರಾ ಪೈ
    ಸಹಾಯಕ ಪ್ರಾಧ್ಯಾಪಕರು
    ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗ
    ಎಸ್.ಡಿ.ಎಮ್. ಆರ್ಯುವೇದ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ,
    ಕುತ್ಪಾಡಿ, ಉಡುಪಿ

Must Read