October 16, 2026
Friday, October 16, 2026
spot_img

ಕಾವೇರಿ ತೀರದಲ್ಲಿ ಭಕ್ತಿಯ ಸಂಭ್ರಮ: ಇಂದಿನಿಂದ KRS ಬೃಂದಾವನದಲ್ಲಿ ಭವ್ಯ ‘ಕಾವೇರಿ ಆರತಿ’ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾವೇರಿ ನದಿಯ ಮಹತ್ವ, ನದಿಯ ಮೇಲಿನ ಭಕ್ತಿ ಹಾಗೂ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಭವ್ಯ ‘ಕಾವೇರಿ ಆರತಿ’ ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಬೃಂದಾವನ ಸಜ್ಜಾಗಿದೆ.

ಕಾವೇರಿ ಆರತಿ ಉದ್ಘಾಟಿಸಲಿರುವ ಸಿಎಂ

ಇಂದು ಸಂಜೆ 6 ಗಂಟೆಗೆ ನಡೆಯಲಿರುವ ಈ ವಿಶೇಷ ಸಮಾರಂಭಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ. ಕೆಆರ್‌ಎಸ್‌ ಬೃಂದಾವನದಲ್ಲಿ ನಡೆಯಲಿರುವ ಕಾವೇರಿ ಆರತಿ ಕಾರ್ಯಕ್ರಮವು ಅಕ್ಟೋಬರ್ 21ರವರೆಗೆ ನಿರಂತರವಾಗಿ ನಡೆಯಲಿದ್ದು, ಪ್ರತಿದಿನ ಸಂಜೆ 6 ಗಂಟೆಗೆ ಆರತಿ ನೆರವೇರಿಸಲು ವೇಳಾಪಟ್ಟಿ ರೂಪಿಸಲಾಗಿದೆ.

ಇದನ್ನೂ ಓದಿ:

ಕಾವೇರಿ ನದಿಯ ಸಾನ್ನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಭಾಗವಹಿಸಲು ಅವಕಾಶವಿದ್ದು, ನದಿಯ ಪಾವಿತ್ರ್ಯವನ್ನು ಗೌರವಿಸುವುದರ ಜೊತೆಗೆ, ಕಾವೇರಿಯೊಂದಿಗೆ ಜನರಿಗಿರುವ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಪ್ರತಿಬಿಂಬಿಸುವುದು ಈ ಸಮಾರಂಭದ ಪ್ರಮುಖ ಉದ್ದೇಶವಾಗಿದೆ ಎಂದರೂ ತಪ್ಪಾಗಲಾರದು.

ಹಲವು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ

ಈ ಭವ್ಯ ಕಾರ್ಯಕ್ರಮವನ್ನು ಜಲಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮ ಹಾಗೂ ಮಂಡ್ಯ ಜಿಲ್ಲಾಡಳಿತ ಜಂಟಿಯಾಗಿ ಆಯೋಜಿಸಿವೆ. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸಚಿವರಾದ ಎನ್. ಚಲುವರಾಯಸ್ವಾಮಿ, ಎಂ.ಪಿ. ನರೇಂದ್ರಸ್ವಾಮಿ, ಕೆ.ಜೆ. ಜಾರ್ಜ್, ಶಿವರಾಜ್ ತಂಗಡಗಿ ಹಾಗೂ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

Must Read