October 16, 2026
Friday, October 16, 2026
spot_img

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಖಾಸಗಿ ಸ್ಲೀಪರ್‌ ಬಸ್‌–ಲಾರಿ ನಡುವೆ ಡಿಕ್ಕಿ, ನಾಲ್ವರು ಬ*ಲಿ, 20ಕ್ಕೂ ಹೆಚ್ಚು ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಿರ್ನಾಳ್‌ ಗೇಟ್‌ ಸಮೀಪ ಶುಕ್ರವಾರ ಬೆಳಗಿನ ಜಾವ ಖಾಸಗಿ ಸ್ಲೀಪರ್‌ ಬಸ್‌ ಮತ್ತು ಲಾರಿ ಭೀಕರ ಅಪಘಾತ ಸಂಭವಿಸಿದ್ದು, ನಾಲ್ಕು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ಕೇರಳದ ಕಡೆಗೆ ಸಾಗುತ್ತಿದ್ದ ಸ್ಲೀಪರ್‌ ಬಸ್‌

ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಅಪಘಾತ ಸಂಭವಿಸಿದೆ. ಪಿರಿಯಾಪಟ್ಟಣದಿಂದ ಮೈಸೂರಿನತ್ತ ಲಾರಿ ಸಂಚರಿಸುತ್ತಿದ್ದರೆ, ಮೈಸೂರಿನಿಂದ ಕೇರಳದ ಕಡೆಗೆ ಖಾಸಗಿ ಸ್ಲೀಪರ್‌ ಬಸ್‌ ತೆರಳುತ್ತಿತ್ತು. ಈ ವೇಳೆ ಎರಡೂ ವಾಹನಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ನಾಲ್ವರ ಮೃತದೇಹಗಳನ್ನು ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡ 20ಕ್ಕೂ ಹೆಚ್ಚು ಮಂದಿಗೆ ಅದೇ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಕೆಲವರ ಆರೋಗ್ಯ ಸ್ಥಿತಿ ಗಂಭೀರ

ಗಾಯಾಳುಗಳ ಪೈಕಿ ಕೆಲವರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಕೆಲವರನ್ನು ಹೆಚ್ಚಿನ ಸೌಲಭ್ಯಗಳಿರುವ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಇನ್ನು ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದು, ಸ್ಥಳ ಪರಿಶೀಲನೆ, ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ಅಪಘಾತದ ಸಂದರ್ಭಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Must Read