October 16, 2026
Friday, October 16, 2026
spot_img

ಆಫೀಸ್ ಕೆಲಸ ಮನೆಗೆ ಬಂತು, ಆರಾಮದ ಜೊತೆಗೆ ನೋವನ್ನೂ ತಂತು: ಪಾರಾಗುವುದು ಹೇಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ನಂತರದ ದಿನಗಳಲ್ಲಿ ‘ವರ್ಕ್ ಫ್ರಮ್ ಹೋಮ್’ ಅಂದರೆ ಮನೆಯಿಂದಲೇ ಕೆಲಸ ಮಾಡುವುದು ನಮ್ಮ ಜೀವನದ ಭಾಗವೇ ಆಗಿಹೋಗಿದೆ. ಪ್ರಯಾಣದ ಜಂಜಾಟ ಮತ್ತು ಆಫೀಸಿನ ಗಡಿಬಿಡಿಯಿಂದ ಪಾರಾಗಿದ್ದೇವೆ ಎಂಬ ಸಂತಸವಿದ್ದರೂ, ಇದರ ಜೊತೆಗೇ ಮತ್ತೊಂದು ದೊಡ್ಡ ಸಮಸ್ಯೆ ಸೌಂಡ್ ಇಲ್ಲದೆ ಬಾಗಿಲು ತಟ್ಟುತ್ತಿದೆ. ಅದೇ ದೀರ್ಘಾವಧಿಯ ಕುಳಿತುಕೊಳ್ಳುವಿಕೆಯಿಂದ ಬರುವ ಬೆನ್ನುನೋವು, ಕುತ್ತಿಗೆ ಬಿಗಿತ ಹಾಗೂ ಸ್ನಾಯುಗಳ ತೊಂದರೆ.

ಆಫೀಸಿನಲ್ಲಿ ಕನಿಷ್ಠ ಪಕ್ಷ ಸೂಕ್ತ ಟೇಬಲ್ ಮತ್ತು ಕುರ್ಚಿಗಳಿರುತ್ತವೆ. ಆದರೆ ಮನೆಯಲ್ಲಿ ಕುಳಿತಾಗ ನಮಗೆ ಆರಾಮ ಮುಖ್ಯ ಎನಿಸುತ್ತದೆ. ಹಾಸಿಗೆಯ ಮೇಲೆ ವಾಲಿ, ಸೋಫಾದಲ್ಲಿ ಅರ್ಧ ಮಲಗಿ ಅಥವಾ ಗೂನು ಬೆನ್ನಿನಲ್ಲಿ ಲ್ಯಾಪ್‌ಟಾಪ್ ಇಟ್ಟುಕೊಂಡು ಘಂಟೆಗಟ್ಟಲೆ ಕೆಲಸ ಮಾಡುತ್ತೇವೆ. ಈ ರೀತಿಯ ತಪ್ಪು ಕುಳಿತುಕೊಳ್ಳುವ ಭಂಗಿಯು ಬೆನ್ನೆಲುಬಿನ ಮೇಲೆ ವಿಪರೀತ ಒತ್ತಡ ಹೇರುತ್ತದೆ. ಕಾಲಕ್ರಮೇಣ ಬೆನ್ನಿನ ಕೆಳಭಾಗದ ನೋವು ಪ್ರತಿಯೊಬ್ಬರ ನಿತ್ಯದ ಸಮಸ್ಯೆಯಾಗಿ ಬದಲಾಗುತ್ತದೆ.

ದಿನಕ್ಕೆ 8 ರಿಂದ 10 ಗಂಟೆಗಳ ಕಾಲ ತಲೆಯನ್ನು ತಗ್ಗಿಸಿ ಸ್ಕ್ರೀನ್ ಅಥವಾ ಲ್ಯಾಪ್‌ಟಾಪ್ ನೋಡುವಾಗ ಕುತ್ತಿಗೆಯ ಸ್ನಾಯುಗಳು ಹಾಗೂ ಕುತ್ತಿಗೆಯ ಮೂಳೆಗಳು ತೀವ್ರ ಒತ್ತಡಕ್ಕೆ ಒಳಗಾಗುತ್ತವೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಟೆಕ್ಸ್ಟ್ ನೆಕ್’ ಎನ್ನಲಾಗುತ್ತದೆ. ಇದರಿಂದ ಕುತ್ತಿಗೆ ಬಿಗಿದುಕೊಳ್ಳುವುದು, ಹೆಗಲಿನಲ್ಲಿ ತೀವ್ರ ನೋವು ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.

ಒಂದೇ ಕಡೆ ಗಂಟೆಗಟ್ಟಲೆ ಕದಲದೆ ಕುಳಿತುಕೊಳ್ಳುವುದರಿಂದ ದೇಹದ ಕೆಳಭಾಗದ ರಕ್ತಸಂಚಾರ ಕಡಿಮೆಯಾಗುತ್ತದೆ. ಸ್ನಾಯುಗಳು ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಂಡು ಬಿಗಿಯಾಗುತ್ತವೆ. ಕಾಲಿನಲ್ಲಿ ಸೆಳೆತ, ಮಂಡಿ ನೋವು ಹಾಗೂ ಸೊಂಟದ ನರಗಳು ಜಜ್ಜಲ್ಪಡುವ ಸಯಾಟಿಕಾ ದಂತಹ ಗಂಭೀರ ತೊಂದರೆಗಳಿಗೂ ಇದು ದಾರಿಯಾಗುತ್ತದೆ.

ಪರಿಹಾರವೇನು?

ಲ್ಯಾಪ್‌ಟಾಪ್ ಅನ್ನು ನಿಮ್ಮ ಕಣ್ಣಿನ ನೇರಕ್ಕೆ ಇಟ್ಟುಕೊಳ್ಳಿ. ಬೆನ್ನಿಗೆ ಸರಿಯಾದ ಆಸರೆ ನೀಡುವ ಕುರ್ಚಿಯನ್ನು ಬಳಸಿ.

ಪ್ರತಿ 20 ನಿಮಿಷಕ್ಕೊಮ್ಮೆ 20 ಅಡಿ ದೂರದಲ್ಲಿರುವ ವಸ್ತುವನ್ನು 20 ಸೆಕೆಂಡುಗಳ ಕಾಲ ನೋಡಿ ಮತ್ತು ಪ್ರತಿ 45 ನಿಮಿಷಕ್ಕೊಮ್ಮೆ ಎದ್ದು 2 ನಿಮಿಷ ನಡೆದಾಡಿ.

ಕುಳಿತಲ್ಲಿಯೇ ಕುತ್ತಿಗೆಯನ್ನು ಮೆಲ್ಲನೆ ತಿರುಗಿಸುವುದು, ಹೆಗಲನ್ನು ಮೇಲೆ-ಕೆಳಗೆ ಮಾಡುವುದು ಹಾಗೂ ದೇಹವನ್ನು ಹಿಂದಕ್ಕೆ ಚಾಚುವ ಅಭ್ಯಾಸ ಮಾಡಿಕೊಳ್ಳಿ.

ಬೆಳಿಗ್ಗೆ ಅಥವಾ ಸಂಜೆ ಕನಿಷ್ಠ 30 ನಿಮಿಷಗಳ ಕಾಲ ನಡಿಗೆ, ಯೋಗ ಅಥವಾ ಹಗುರವಾದ ವ್ಯಾಯಾಮ ಮಾಡುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ.

Must Read