October 16, 2026
Friday, October 16, 2026
spot_img

ಪಂಜಾಬ್‌ನಲ್ಲಿ ಡ್ರಗ್ಸ್‌ ಮಾಫಿಯಾ ಅಬ್ಬರ: ಜೋಟಾ ಹ*ತ್ಯೆ ಕೇಸ್‌ಗೆ ಅಮಿತ್‌ ಶಾ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್‌ನಲ್ಲಿ ಮಾದಕ ವಸ್ತುಗಳ ಜಾಲ, ಗ್ಯಾಂಗ್‌ಸ್ಟರ್‌ಗಳ ಅಟ್ಟಹಾಸ ಮತ್ತು ಅದರ ವಿರುದ್ಧ ಧ್ವನಿ ಎತ್ತುವವರ ಸುರಕ್ಷತೆ ಕುರಿತು ರಾಜಕೀಯ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಮಾದಕ ವಸ್ತುಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ಪರವಿಂದರ್ ಸಿಂಗ್ ಜೋಟಾ ಅವರ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಈ ಸಂಬಂಧ ಪಂಜಾಬ್‌ ಸರ್ಕಾರದಿಂದ ವರದಿ ಕೇಳಲು ಕೇಂದ್ರ ಗೃಹ ಸಚಿವಾಲಯ ಮುಂದಾಗಲಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಭಗವಂತ್‌ ಮಾನ್‌ ನೇತೃತ್ವದ ಆಮ್‌ ಆದ್ಮಿ ಪಕ್ಷದ ಸರ್ಕಾರದ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಾರೆ.

ಡ್ರಗ್ಸ್‌ ದಂಧೆ ಬಗ್ಗೆ ಅಮಿತ್‌ ಶಾ ಕಳವಳ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪಂಜಾಬಿ ಭಾಷೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅಮಿತ್‌ ಶಾ, ರಾಜ್ಯದಲ್ಲಿ ಮಾದಕ ವಸ್ತುಗಳ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಡ್ರಗ್ಸ್‌ ಜಾಲದ ವಿಸ್ತರಣೆ ಮತ್ತು ಸಂಘಟಿತ ಅಪರಾಧಗಳ ಹೆಚ್ಚಳದ ನಡುವೆ, ಮಾದಕ ವಸ್ತುಗಳ ವಿರುದ್ಧ ಮಾತನಾಡುವವರ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ ಎಂದು ಅವರು ಹೇಳಿದ್ದಾರೆ. ರಾಜ್ಯದ ಜನರಿಗೆ ಸುರಕ್ಷತೆ ಒದಗಿಸುವ ಜವಾಬ್ದಾರಿಯನ್ನು ಮಾನ್‌ ಸರ್ಕಾರ ಸಮರ್ಪಕವಾಗಿ ನಿರ್ವಹಿಸುತ್ತಿದೆಯೇ ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ.

ದಿರ್ಬಾ ಘಟನೆಯ ಬಗ್ಗೆಯೂ ವರದಿ ಕೇಳಲು ನಿರ್ಧಾರ

ಪಂಜಾಬ್‌ನ ದಿರ್ಬಾದಲ್ಲಿ ವ್ಯಕ್ತಿಯೊಬ್ಬನಿಗೆ ಬಲವಂತವಾಗಿ ಮಾದಕ ವಸ್ತು ಸೇವಿಸುವಂತೆ ಮಾಡಿದ ಬಳಿಕ ಆತ ಮೃತಪಟ್ಟಿದ್ದಾನೆ ಎನ್ನಲಾದ ಘಟನೆಯನ್ನೂ ಅಮಿತ್‌ ಶಾ ಪ್ರಸ್ತಾಪಿಸಿದ್ದಾರೆ. ಈ ಪ್ರಕರಣದ ಬಗ್ಗೆಯೂ ಪಂಜಾಬ್‌ ಸರ್ಕಾರದಿಂದ ಪ್ರತಿಕ್ರಿಯೆ ಕೇಳಲಾಗುವುದು ಎಂದು ತಿಳಿಸಿದ್ದಾರೆ. ಮಾದಕ ವಸ್ತುಗಳ ಜಾಲದ ಹಿಂದೆ ಯಾರ ಪ್ರಭಾವ ಅಥವಾ ಬೆಂಬಲವಿದೆ ಎಂಬುದರ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದರು.

ಡ್ರಗ್ಸ್‌ ಮುಕ್ತ ಪಂಜಾಬ್‌ ನಿರ್ಮಾಣದ ಭರವಸೆ

ಪಂಜಾಬ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾದಕ ವಸ್ತುಗಳ ದಂಧೆ ಮತ್ತು ಗ್ಯಾಂಗ್‌ಸ್ಟರ್‌ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಸುರಕ್ಷಿತ ರಾಜ್ಯ ನಿರ್ಮಿಸುವುದಾಗಿ ಅಮಿತ್‌ ಶಾ ಭರವಸೆ ನೀಡಿದ್ದಾರೆ. ಯುವಜನರ ಭವಿಷ್ಯ ರಕ್ಷಿಸುವುದು ಮತ್ತು ಕಾನೂನಿನ ಆಡಳಿತವನ್ನು ಬಲಪಡಿಸುವುದು ತಮ್ಮ ಗುರಿ ಎಂದು ಅವರು ಹೇಳಿದ್ದಾರೆ.

ಜೋಟಾ ಹತ್ಯೆ ಪ್ರಕರಣದಲ್ಲಿ ಪೊಲೀಸರ ಕ್ರಮ

ಜೋಟಾ ಹತ್ಯೆ ಪ್ರಕರಣದಲ್ಲಿ ಗುಂಡು ಹಾರಿಸಿದ ಆರೋಪ ಎದುರಿಸುತ್ತಿರುವ ಅಶ್ವನಿ ಕುಮಾರ್‌ ಮತ್ತು ಆತನ ಸಹಚರ ವಿಪಿನ್‌ ಕುಮಾರ್‌ ಅವರನ್ನು ಬಂಧಿಸಿ ಏಳು ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ. ಅಶ್ವನಿಯ ಪತ್ನಿ ನೀಲಂ ರಾಣಿ ಮತ್ತು ಲಾಡಿ ಎಂಬ ಮತ್ತೊಬ್ಬ ಸಹಚರನನ್ನೂ ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಏನಿದು ಜೋಟಾ ಪ್ರಕರಣ?

ಅಕ್ಟೋಬರ್ 13, 2026ರಂದು ಪಂಜಾಬ್‌ನ ಮಾನ್ಸಾದಲ್ಲಿ ಮಾದಕವಸ್ತುಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಪರ್ವಿಂದರ್ ಸಿಂಗ್ ಜೋಟಾ ಅವರನ್ನು ಮೆಡಿಕಲ್ ಶಾಪ್‌ವೊಂದರ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ನಿಷೇಧಿತ ಮಾದಕವಸ್ತುಗಳ ಮಾರಾಟದ ವಿಚಾರವಾಗಿ ಔಷಧ ಮಳಿಗೆಯ ಮಾಲೀಕನೊಂದಿಗೆ ಜೋಟಾ ತೀವ್ರ ವಾಗ್ವಾದ ನಡೆಸುತ್ತಿದ್ದರು. ಈ ಘಟನೆಯನ್ನು ಅವರು ಮೊಬೈಲ್‌ನಲ್ಲಿ ಫೇಸ್‌ಬುಕ್ ಲೈವ್ ಮಾಡುತ್ತಿದ್ದ ಸಂದರ್ಭದಲ್ಲಿ, ಅಂಗಡಿ ಮಾಲೀಕ ಅಶ್ವನಿ ಕುಮಾರ್‌ ಹತ್ತಿರದಿಂದಲೇ ಹಲವು ಸುತ್ತು ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಬಳಿಕ ಅಂಗಡಿಯ ಶಟರ್ ಎಳೆದು ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ.

Must Read