ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ರಾಜಧಾನಿಯ ಹೃದಯಭಾಗವಾದ ಕನಾಟ್ ಪ್ಲೇಸ್ನಲ್ಲಿ ಇಂದು ಸಂಜೆ ಭಾರೀ ಹೈ-ಡ್ರಾಮಾ ನಡೆದಿದೆ. CJP ಹಮ್ಮಿಕೊಂಡಿದ್ದ ‘ಲೆಹ್ರಾ ದೋ ತಿರಂಗಾ’ ಬೃಹತ್ ಧ್ವಜ ಸತ್ಯಾಗ್ರಹ ಮೆರವಣಿಗೆಯ ಸಂದರ್ಭದಲ್ಲಿ ಜಾರಿಯಲ್ಲಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಶುಕ್ರವಾರ ಸಂಜೆ ಬರೋಬ್ಬರಿ 150 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.
ಇದಕ್ಕೂ ಮುನ್ನ ಸಿಜೆಪಿ ಮುಖ್ಯಸ್ಥ ಅಭಿಜೀತ್ ದೀಪ್ಕೆ ಅವರನ್ನು ಮಧ್ಯಾಹ್ನವೇ ಬಂಧಿಸಿದ್ದರೂ, ನೂರಾರು ಕಾರ್ಯಕರ್ತರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಕನಾಟ್ ಪ್ಲೇಸ್ನತ್ತ ನುಗ್ಗಲು ಯತ್ನಿಸಿದಾಗ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಪೊಲೀಸ್, ಕಾರ್ಯಕರ್ತರು ನಡುವೆ ತಳ್ಳಾಟ-ನೂಕಾಟ
ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ಅವರ ಮುನ್ನೆಚ್ಚರಿಕೆ ಬಂಧನ ಹಾಗೂ ಕನಾಟ್ ಪ್ಲೇಸ್ ಸೆಂಟ್ರಲ್ ಪಾರ್ಕ್ ಸಂಪೂರ್ಣ ಬಂದ್ ಆಗಿದ್ದರೂ, ಇಂದು ಸಂಜೆ 5 ಗಂಟೆಯ ಸುಮಾರಿಗೆ ವಿವಿಧ ಭಾಗಗಳಿಂದ ಬಂದ ನೂರಾರು ಪ್ರತಿಭಟನಾಕಾರರು ಕನಾಟ್ ಪ್ಲೇಸ್ನ ಇನ್ನರ್ ಮತ್ತು ಔಟರ್ ಸರ್ಕಲ್ ರಸ್ತೆಗಳಲ್ಲಿ ಜಮಾಯಿಸಲು ಆರಂಭಿಸಿದರು. ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮುಂದೆ ಸಾಗುತ್ತಿದ್ದ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸ್ ಮತ್ತು ಸಶಸ್ತ್ರ ಸೀಮಾ ಬಲ್ ಯೋಧರು ತಡೆದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟವಾಗಿದ್ದು, ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು 150 ಕ್ಕೂ ಹೆಚ್ಚು ಜನರನ್ನು ಬಸ್ಗಳಲ್ಲಿ ತುಂಬಿಸಿದರು.
ಕಲ್ಯಾಣಪುರಿ ಪೊಲೀಸ್ ಲೈನ್ಸ್ ಗೆ ರವಾನೆ
ದೆಹಲಿ ಪೊಲೀಸರ ಅಧಿಕೃತ ಮೂಲಗಳ ಪ್ರಕಾರ, ವಶಕ್ಕೆ ಪಡೆದ ಎಲ್ಲಾ 150 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಕನಾಟ್ ಪ್ಲೇಸ್ ವ್ಯಾಪ್ತಿಯಿಂದ ದೂರವಿರುವ ಪೂರ್ವ ದೆಹಲಿಯ ಕಲ್ಯಾಣಪುರಿ ಪೊಲೀಸ್ ಲೈನ್ಸ್ ಆವರಣಕ್ಕೆ ಸುರಕ್ಷಿತವಾಗಿ ರವಾನಿಸಲಾಗಿದೆ. “ಕನಾಟ್ ಪ್ಲೇಸ್ನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163 ರ ಅಡಿ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ಭಾಗದಲ್ಲಿ ಯಾವುದೇ ಸಾರ್ವಜನಿಕ ರ್ಯಾಲಿಗೆ ನ್ಯಾಯಾಲಯವಾಗಲಿ ಅಥವಾ ಮುನ್ಸಿಪಲ್ ಕೌನ್ಸಿಲ್ ಆಗಲಿ ಅನುಮತಿ ನೀಡಿಲ್ಲ. ಕಾನೂನು ಕೈಗೆತ್ತಿಕೊಂಡು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:
ವಿರೋಧ ಪಕ್ಷಗಳ ಆಕ್ರೋಶ
ಇತ್ತ ಸಿಜೆಪಿ ನಾಯಕರ ಸಾಮೂಹಿಕ ಬಂಧನ ಪ್ರಕ್ರಿಯೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸೇರಿದಂತೆ ‘ಇಂಡಿಯಾ’ ಒಕ್ಕೂಟದ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರವು ದೆಹಲಿಯಲ್ಲಿ “ಅಘೋಷಿತ ತುರ್ತು ಪರಿಸ್ಥಿತಿ” ತಂದಿದೆ ಎಂದು ಅವರು ಜರೆದಿದ್ದಾರೆ. ಮತ್ತೊಂದೆಡೆ, ಈ ನಿರಂತರ ಪ್ರತಿಭಟನೆಗಳಿಂದಾಗಿ ಕನಾಟ್ ಪ್ಲೇಸ್ನಲ್ಲಿ ವ್ಯಾಪಾರ ಸಂಪೂರ್ಣ ಸ್ತಬ್ಧಗೊಂಡಿದ್ದು, ತಮಗೆ ಆಗುತ್ತಿರುವ ಕೋಟ್ಯಂತರ ರೂಪಾಯಿ ನಷ್ಟವನ್ನು ತಡೆಯಲು ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ದೆಹಲಿ ವರ್ತಕರ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿವೆ.



