October 18, 2026
Sunday, October 18, 2026
spot_img

ಆರೋಗ್ಯದ ಹೆಸರಿನಲ್ಲಿ ತಪ್ಪು ಮಾಹಿತಿ: ನೆಸ್ಲೆ, HUL ಉತ್ಪನ್ನಗಳಿಗೆ FSSAI ನೋಟಿಸ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಹಾರ ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲಿನ ಮಾಹಿತಿ ಹಾಗೂ ಜಾಹೀರಾತುಗಳಲ್ಲಿ ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ನೆಸ್ಲೆ ಇಂಡಿಯಾ ಮತ್ತು ಹಿಂದೂಸ್ತಾನ್ ಯೂನಿಲಿವರ್‌ (HUL) ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದೆ. ಕೆಲವು ಉತ್ಪನ್ನಗಳ ಆರೋಗ್ಯ ಸಂಬಂಧಿತ ಹೇಳಿಕೆಗಳು ಮತ್ತು ಲೇಬಲ್‌ಗಳಲ್ಲಿನ ಮಾಹಿತಿಯಲ್ಲಿ ನಿಯಮ ಉಲ್ಲಂಘನೆ ಕಂಡುಬಂದಿರುವುದಾಗಿ ಪ್ರಾಧಿಕಾರ ತಿಳಿಸಿದೆ.

ಹಾರ್ಲಿಕ್ಸ್ ಉತ್ಪನ್ನಗಳ ಬಗ್ಗೆ ಆಕ್ಷೇಪ

HUL ಕಂಪನಿಯ ‘ಹಾರ್ಲಿಕ್ಸ್ ವುಮೆನ್ಸ್ ಪ್ಲಸ್ ಚಾಕೊಲೇಟ್ ನ್ಯೂಟ್ರಿಷನ್ ಡ್ರಿಂಕ್’ ಪ್ಯಾಕೆಟ್‌ನಲ್ಲಿ ಮೂಳೆಗಳ ಬಲವರ್ಧನೆ ಹಾಗೂ ಆರು ತಿಂಗಳಲ್ಲಿ ಮೂಳೆಗಳ ಆರೋಗ್ಯ ಸುಧಾರಿಸುವ ಕುರಿತು ಮಾಡಿರುವ ಹೇಳಿಕೆಗಳು ನಿಯಮಗಳಿಗೆ ಅನುಗುಣವಾಗಿಲ್ಲ ಎಂದು FSSAI ಹೇಳಿದೆ. ‘ಹೆಲ್ದಿ ಮಸಲ್ಸ್’ ಎಂಬ ಪದಪ್ರಯೋಗವೂ ಆಹಾರ ಉತ್ಪನ್ನಗಳ ಆರೋಗ್ಯದ ಕುರಿತ ಹೇಳಿಕೆಗಳಿಗೆ ಅನ್ವಯಿಸುವ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದೆ.

ಉತ್ಪನ್ನದಲ್ಲಿ ಮಾಲ್ಟೋಡೆಕ್ಸ್‌ಟ್ರಿನ್ ಇರುವ ಹಿನ್ನೆಲೆಯಲ್ಲಿ ‘ಸಕ್ಕರೆ ಸೇರಿಸಿಲ್ಲ’ ಎಂಬ ಹೇಳಿಕೆಯ ಬಗ್ಗೆಯೂ ಪ್ರಶ್ನೆ ಎತ್ತಲಾಗಿದೆ. ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಕೆ2 ಶಿಫಾರಸು ಮಾಡಲಾದ ದೈನಂದಿನ ಅಗತ್ಯದ ಶೇ.100ರಷ್ಟು ಒದಗಿಸುತ್ತದೆ ಎಂಬ ಹೇಳಿಕೆಯೂ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಪ್ರಾಧಿಕಾರ ತಿಳಿಸಿದೆ.

ಇದೇ ವೇಳೆ, ‘ಹಾರ್ಲಿಕ್ಸ್ ಮದರ್ಸ್ ಪ್ಲಸ್ ಕೇಸರ್’ ಉತ್ಪನ್ನದ ಮೇಲೆ ಮಗುವಿನ ಆರೋಗ್ಯಕರ ಜನನ ತೂಕಕ್ಕೆ ನೆರವಾಗುತ್ತದೆ ಎಂಬ ಹೇಳಿಕೆ ನೀಡಿರುವುದನ್ನೂ ಪರಿಶೀಲಿಸಲಾಗಿದೆ. ಈ ಹೇಳಿಕೆಗಳು ಗ್ರಾಹಕರನ್ನು ತಪ್ಪುದಾರಿಗೆಳೆಯುವ ಸಾಧ್ಯತೆಯಿದೆ ಎಂದು FSSAI ಅಭಿಪ್ರಾಯಪಟ್ಟಿದೆ.

ನೆಸ್ಲೆ ಕಾಫಿ ಉತ್ಪನ್ನಗಳ ಲೇಬಲ್‌ಗಳಲ್ಲೂ ವ್ಯತ್ಯಾಸ

ನೆಸ್ಲೆಯ ‘ನೆಸ್ಕಫೆ ಇಂಟೆನ್ಸ್ ಕ್ಯಾಪಿಚಿನೊ’, ‘ಚೊಕೊ ಮೋಕಾ’ ಮತ್ತು ‘ಚಿಲ್ಡ್ ಲಾಟೆ’ ಉತ್ಪನ್ನಗಳ ಪ್ಯಾಕೆಟ್‌ಗಳಲ್ಲಿ ಮುಂಭಾಗದಲ್ಲಿ ‘ಫ್ಲೇವರ್ಡ್ ಮಿಲ್ಕ್’ ಎಂದು ನಮೂದಿಸಿದ್ದರೆ, ಹಿಂಭಾಗದಲ್ಲಿ ‘ಡೈರಿ ಆಧಾರಿತ ಪಾನೀಯ’ ಎಂದು ವಿವರಿಸಿರುವುದಕ್ಕೆ ಪ್ರಾಧಿಕಾರ ಆಕ್ಷೇಪಿಸಿದೆ. ಆನ್‌ಲೈನ್ ಮಾರಾಟ ವೇದಿಕೆಗಳಲ್ಲಿನ ಉತ್ಪನ್ನ ವಿವರಣೆಗಳಲ್ಲೂ ವ್ಯತ್ಯಾಸ ಕಂಡುಬಂದಿದೆ ಎಂದು ತಿಳಿಸಿದೆ.

ಇದಲ್ಲದೆ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇರುವವರ ಆಹಾರ ನಿರ್ವಹಣೆಗೆ ಉದ್ದೇಶಿಸಲಾದ ನೆಸ್ಲೆ ರಿಸೋರ್ಸ್ ರೀನಲ್ ಉತ್ಪನ್ನಕ್ಕೆ ಅಗತ್ಯ ಪೂರ್ವಾನುಮತಿ ಪಡೆದಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಉತ್ತರ ಸಲ್ಲಿಸಲು ಸೂಚನೆ

ಸಂಬಂಧಪಟ್ಟ ಕಂಪನಿಗಳು ನಿಗದಿತ ಅವಧಿಯಲ್ಲಿ ತಮ್ಮ ವಿವರಣೆ ಸಲ್ಲಿಸುವಂತೆ FSSAI ಸೂಚಿಸಿದೆ. ಉತ್ತರ ತೃಪ್ತಿಕರವಾಗಿರದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

Must Read