October 18, 2026
Sunday, October 18, 2026
spot_img

ಹಾಲಿವುಡ್ ಕ್ಲಾಸಿಕ್ಸ್ ಜೊತೆ ‘ರಣಬಾಲಿ’ ಹೋಲಿಕೆ: ವಿಜಯ್ ಮಾತು ಕೇಳಿ ಅಭಿಮಾನಿಗಳು ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಹುಲ್ ಸಾಂಕೃತ್ಯಾಯನ್ ನಿರ್ದೇಶನದಲ್ಲಿ ಮೂಡಿಬಂದಿರುವ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ರಣಬಾಲಿ’ ಸಿನಿಮಾ ಅಕ್ಟೋಬರ್ 16ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. 1800ರ ದಶಕದ ಬ್ರಿಟಿಷ್ ಆಳ್ವಿಕೆ ಹಾಗೂ ಕ್ಷಾಮದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ, ಬ್ರಿಟಿಷರ ದಬ್ಬಾಳಿಕೆಯಿಂದ ತನ್ನ ಜನರನ್ನು ರಕ್ಷಿಸಲು ಹೋರಾಡುವ ನಾಯಕನ ಕಥೆಯನ್ನು ತೋರಿಸಲಾಗಿದೆ. ಆದರೆ, ಸಿನಿಮಾ ಬಿಡುಗಡೆಯ ನಂತರ ವಿಜಯವಾಡದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ನಟ ವಿಜಯ್ ದೇವರಕೊಂಡ ನೀಡಿದ ಹೇಳಿಕೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಭೆಯಲ್ಲಿ ಮಾತನಾಡಿದ ವಿಜಯ್ ದೇವರಕೊಂಡ, “ನಾನು ನಟನಾಗಬೇಕು ಎಂದು ಕನಸು ಕಾಣುತ್ತಿದ್ದಾಗ ನಮಗೆ ಹಾಲಿವುಡ್‌ನ ‘ಬ್ರೇವ್‌ಹಾರ್ಟ್’ ಮತ್ತು ‘ಶಿಂಡ್ಲರ್ಸ್ ಲಿಸ್ಟ್’ ನಂತಹ ಪ್ರಸಿದ್ಧ ಸಿನಿಮಾಗಳನ್ನು ತೋರಿಸುತ್ತಿದ್ದರು. ಬೆಳೆದ ಮೇಲೆ ‘ಇಂಗ್ಲೋರಿಯಸ್ ಬಾಸ್ಟರ್ಡ್ಸ್’ ಸಿನಿಮಾ ವೀಕ್ಷಿಸಿದೆ. ಅಂದೇ ನಾನು ನಟನಾದಾಗ ಇಂತಹ ಸಿನಿಮಾಗಳನ್ನು ಮಾಡಬೇಕು ಎಂದು ಬಯಸಿದ್ದೆ” ಎಂದು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು.

ಮುಂದುವರಿದು ಮಾತನಾಡುತ್ತಾ, “ರಣಬಾಲಿ ಚಿತ್ರವು ‘ಬ್ರೇವ್‌ಹಾರ್ಟ್’, ‘ಶಿಂಡ್ಲರ್ಸ್ ಲಿಸ್ಟ್’ ಮತ್ತು ‘ಇಂಗ್ಲೋರಿಯಸ್ ಬಾಸ್ಟರ್ಡ್ಸ್’ ಸಿನಿಮಾಗಳಿಗೆ ನಮ್ಮ ಭಾರತೀಯ ಮಾಸ್-ಕಮರ್ಷಿಯಲ್ ಶೈಲಿಯಲ್ಲಿ ನೀಡಿದ ಉತ್ತರವಾಗಿದೆ. ಇದು ನಮ್ಮ ಇತಿಹಾಸ ಮತ್ತು ಸಂಸ್ಕೃತಿ. 2 ಗಂಟೆ 50 ನಿಮಿಷಗಳ ಕಾಲ ಈ ಸಿನಿಮಾ ನಿಮ್ಮನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತದೆ, ಇದು ನನ್ನ ಗ್ಯಾರಂಟಿ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯ್ ದೇವರಕೊಂಡ ಅವರ ಈ ಹೇಳಿಕೆಯನ್ನು ಕೇಳಿ ಇಂಟರ್ನೆಟ್ ಜಗತ್ತು ಸಂಪೂರ್ಣ ಗೊಂದಲಕ್ಕೊಳಗಾಗಿದೆ. ‘ಶಿಂಡ್ಲರ್ಸ್ ಲಿಸ್ಟ್’ನಂತಹ ಗಂಭೀರ ಹಾಗೂ ಭಾವುಕ ವಿಷಯದ ಸಿನಿಮಾವನ್ನು ಭಾರತೀಯ ‘ಮಾಸ್-ಕಮರ್ಷಿಯಲ್’ ಶೈಲಿಗೆ ಹೋಲಿಸುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಇದನ್ನು ಸಿನಿಮಾ ಪ್ರಚಾರಕ್ಕಾಗಿ ಆಡಿದ ಅತಿರೇಕದ ಮಾತುಗಳೆಂದು ಟ್ರೋಲ್ ಮಾಡುತ್ತಿದ್ದರೆ, ವಿಜಯ್ ಅಭಿಮಾನಿಗಳು ಮಾತ್ರ ಅವರ ಸಿನಿಮಾ ಮೇಲಿನ ಆತ್ಮವಿಶ್ವಾಸವನ್ನು ಬೆಂಬಲಿಸುತ್ತಿದ್ದಾರೆ.

Must Read