ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆಮಾಡಿದ್ದು, ಒಂಬತ್ತು ದಿನಗಳ ʼಶಿಲ್ಪ ಸಮಾಗಮ ಪ್ರದರ್ಶನʼಕ್ಕೆ ಇಂದು ಕೊನೆಯ ದಿನವಾಗಿದೆ. ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವಾಲಯದ ಕಾರ್ಯದರ್ಶನಿ ಸುಧಾಂಶು ಪಂತ್ ಅವರು ಭಾನುವಾರ ಶಿಲ್ಪ ಸಮಾಗಮ ಪ್ರದರ್ಶನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಷ್ಟ್ರೀಯ ಪರಿಶಿಷ್ಟ ಜಾತಿಗಳು ಹಣಕಾಸು ಮತ್ತು ಅಭಿವೃದ್ಧಿ ನಿಗಮ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ ಮತ್ತು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಕುಶಲಕರ್ಮಿಗಳಿಗೆ ಹಾಗೂ ಅರ್ಹ ಫಲಾನುಭವಿಗಳಿಗೆ ಆರ್ಥಿಕ ನೆರವು ಒದಗಿಸುತ್ತದೆ. ಪಂತ್ ಅವರು ವಿವಿಧ ಮಳಿಗೆಗಳನ್ನು ಪರಿಶೀಲಿಸಿ, ನಿರ್ವಾಹಕರು ಮತ್ತು ಸಂದರ್ಶಕರ ಜೊತೆ ಮಾತುಕತೆ ನಡೆಸಿದ್ದಾರೆ. ಕಾರ್ಯಕ್ರಮದ ಬಗ್ಗೆ ಮಾತನಾಡಿ, ಇದು ಹಿಂದುಳಿದ ಸಮುದಾಯಗಳಿಗೆ ಒಂದೊಳ್ಳೆ ಮಾರುಕಟ್ಟೆಯಾಗಿದೆ. ಉದ್ಯಮಶೀತೆಗೆ ಉತ್ಸಾಹ ನೀಡಿದಂತಾಗುತ್ತದೆ. ಕುಶಲಕರ್ಮಿಗಳಿಗೆ ಮಾರುಕಟ್ಟೆ ಸಂಪರ್ಕವನ್ನು ಬಲಪಡಿಸಲು, ಸಾಂಪ್ರದಾಯಿಕ ಕೌಶಲ್ಯಗಳನ್ನು ಉತ್ತೇಜಿಸಲು ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ವಿನ್ಯಾಸಗೊಳಿಸಲಾಗಿದೆ. ಸಂದರ್ಶಕರು ಮತ್ತು ಸಂಭಾವ್ಯ ಗ್ರಾಹಕರೊಂದಿಗೆ ನೇರ ಸಂವಾದ ನಡೆಸುವ ಮೂಲಕ, ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಬಹುದು, ಗ್ರಾಹಕರ ನೆಲೆಯನ್ನು ವಿಸ್ತರಿಸಬಹುದು ಮತ್ತು ತಮ್ಮ ಉದ್ಯಮಗಳ ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಈ ಉಪಕ್ರಮವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವುದಲ್ಲದೆ, ಸಾಂಪ್ರದಾಯಿಕ ಕಲಾ ಪ್ರಕಾರಗಳು ಮತ್ತು ಕೌಶಲ್ಯಗಳನ್ನು ಸಂರಕ್ಷಿಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಕೈಮಗ್ಗದ ಸೀರೆಗಳು, ಸಾಂಬಾರ್ ಪದಾರ್ಥಗಳು, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಅಗರಬತ್ತಿ, ಜೇನುತುಪ್ಪ ಆಧಾರಿತ ಉತ್ಪನ್ನಗಳು, ಅಚ್ಚು-ಕೈ ಮುದ್ರಿತ (ಬ್ಲಾಕ್-ಪ್ರಿಂಟ್) ವಸ್ತುಗಳು, ಚರ್ಮದ ವಸ್ತುಗಳು, ಮರದ ಆಟಿಕೆಗಳು, ಬ್ಯಾಗ್ ಗಳು, ಪರ್ಸ್ಗಳು, ಟೆರಾಕೋಟಾ (ಮಣ್ಣಿನ) ಉತ್ಪನ್ನಗಳು, ಕೃತಕ ಆಭರಣಗಳು, ಬೀಟಿ/ತೇಗು ಸಾಗುವಾನಿ (ರೋಸ್ವುಡ್) ಮರದ ಗೋಡೆ ಅಲಂಕಾರಿಕ ವಸ್ತುಗಳು ಹಾಗೂ ಬೆಡ್ ಮತ್ತು ಕುಶನ್ ಕವರ್ ಗಳಂತಹ ವೈವಿಧ್ಯಮಯ ಉತ್ಪನ್ನಗಳು ಲಭ್ಯವಿವೆ. ಅಲ್ಲದೆ, ಸಾಂಪ್ರದಾಯಿಕ ಖಾದ್ಯಗಳನ್ನು ಬಡಿಸುವ ಆಹಾರ ಮಳಿಗೆಗಳೂ ಇವೆ.
ಈ ಪ್ರದರ್ಶನದಲ್ಲಿ ಒಟ್ಟು 83 ಮಳಿಗೆಗಳಿವೆ. ಇದರಲ್ಲಿ ಕುಶಲಕರ್ಮಿಗಳಿಗೆ 80 ಮಳಿಗೆಗಳನ್ನು ಮೀಸಲಿಡಲಾಗಿದ್ದು, ಅದರಲ್ಲಿ 37 ಮಳಿಗೆಗಳು ಮಹಿಳಾ ಕುಶಲಕರ್ಮಿಗಳಿಗೆ ಸೇರಿವೆ. ಆಂಧ್ರಪ್ರದೇಶ, ಬಿಹಾರ, ಕರ್ನಾಟಕ, ಕೇರಳ, ರಾಜಸ್ಥಾನ, ಪುದುಚೇರಿ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ಮತ್ತು ಉತ್ತರ ಪ್ರದೇಶ ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕುಶಲಕರ್ಮಿಗಳು ಭಾಗಿಯಾಗಿದ್ದಾರೆ. ಶಿಲ್ಪ ಸಮಾಗಮ ಪ್ರದರ್ಶನಕ್ಕೆ ಇಂದು ಕೊನೆಯ ದಿನವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಅರಮನೆಗೆ ತೆರಳಿ ಕರಕುಶಲ ವಸ್ತುಗಳನ್ನು ಖರೀದಿಸಿ, ಕೈಮಗ್ಗದ ಉತ್ಪನ್ನಗಳನ್ನು ವೀಕ್ಷಿಸಬಹುದಾಗಿದೆ.



