ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಪ್ರದೇಶದಲ್ಲಿ ರಾತ್ರಿ ನೂಡಲ್ಸ್ ತಿಂದು ಮಲಗಿದ್ದ ಕುಟುಂಬದ ಐವರು ಸದಸ್ಯರು ಬೆಳಗ್ಗೆ ಹೆಣವಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ.
ಬರೀ ನೂಡಲ್ಸ್ ತಿಂದು ಮೃತಪಟ್ಟಿದ್ದಾರೆ ಎನ್ನುವುದನ್ನು ಸ್ಥಳೀಯರು, ನೆಂಟರು ನಂಬಲು ತಯಾರಿರಲಿಲ್ಲ. ಈ ಮಧ್ಯೆಯೇ ನೂಡಲ್ಸ್‌ನಲ್ಲಿ ವಿಷ ಬೆರೆಸಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ನಾಗ್ಲಾ ಶ್ರೀಪದಂ ಗ್ರಾಮದ ಮಹೇಶ್, ಲಲಿತಾ ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದರು. ಉಸಿರುಚೆಲ್ಲುವ ಮುನ್ನ ಕುಟುಂಬ ಸದಸ್ಯರು ನೂಡಲ್ಸ್ ಹಾಗೂ ಟೀ ಸೇವನೆ ಮಾಡಿದ್ದರು. ಊಟದಿಂದಲೇ ಸಾವು ಸಂಭವಿಸಿರಬಹುದು ಎಂದು ಪೊಲೀಸರು ಚಹಾ ಹಾಗೂ ನೂಡಲ್ಸ್ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಷ್ಟೇ ಅಲ್ಲದೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೂ ಕಳುಹಿಸಲಾಗಿದೆ. ವರದಿ ಬಂದ ನಂತರ ನಿಖರವಾದ ಕಾರಣ ತಿಳಿಯಲಿದೆ.
ಸಾವಿಗೂ ಮುನ್ನ ಮಹೇಶ್ ಅವರ ಫೋನ್‌ನಲ್ಲಿ ವಾಯ್ಸ್ ನೋಟ್ ಸಿಕ್ಕಿದೆ. ನಮ್ಮ ಕುಟುಂಬದ ಈ ಸ್ಥಿತಿಗೆ ಸಹೋದರಿಯರಾದ ಸುನೀತಾ, ಸಪ್ನಾ ಹಾಗೂ ಭಾವ ಶೇಖರ್ ಕಾರಣ ಎಂದು ಮಹೇಶ್ ಆರೋಪ ಮಾಡಿದ್ದಾರೆ. ಕುಟುಂಬದ ಆಸ್ತಿಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಕಿರುಕುಳ ನೀಡಲಾಗಿತ್ತು ಎಂದು ಮಹೇಶ್ ಸಹೋದರ ದೂರು ನೀಡಿದ್ದಾರೆ.
ಮೃತ ಮಹೇಶ್ ಅವರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಸುನೀತಾ, ಸಪ್ನಾ ಮತ್ತು ಶೇಖರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಐವರ ಸಾವಿನಲ್ಲಿ ಬಂಧಿತರಿಗೆ ನಿಜವಾಗಿಯೂ ಯಾವ ರೀತಿಯ ಪಾತ್ರವಿದೆ ಎಂಬುದು ಇನ್ನೂ ತನಿಖೆಯಿಂದ ದೃಢಪಡಬೇಕಿದೆ. ಆಸ್ತಿ ವಿವಾದ, ವಾಯ್ಸ್ ನೋಟ್, ಕುಟುಂಬದ ಸದಸ್ಯರ ನಡುವಿನ ಸಂಬಂಧಗಳು ಮತ್ತು ಸಂಭವನೀಯ ವಿಷಪ್ರಯೋಗ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



