October 19, 2026
Monday, October 19, 2026
spot_img

ಕಬ್ಬು ಬೆಳೆಗಾರರ ಕಿಚ್ಚು ಶಮನಕ್ಕೆ ಮೋದಿ ಮೊರೆ ಹೋದ ಡಿಕೆಶಿ: 5 ಬೇಡಿಕೆ ಈಡೇರಿಸಲು ಒತ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ರೈತರ ಬೇಡಿಕೆಗಳನ್ನು ಈಡೇರಿಸಿ ಕಬ್ಬು ಅರೆಯುವ ಹಂಗಾಮು ಆರಂಭಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಸಕ್ಕರೆ ಬೆಲೆ, ಕಬ್ಬಿನ ನ್ಯಾಯಯುತ ದರ ಹಾಗೂ ಎಥನಾಲ್ ಖರೀದಿ ನೀತಿಗೆ ಸಂಬಂಧಿಸಿದ ಐದು ಪ್ರಮುಖ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ರೈತರ ಪ್ರತಿಭಟನೆಗೆ ಪರಿಹಾರ ಯಾವಾಗ?

ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದು, ಹುಬ್ಬಳ್ಳಿಯತ್ತ ಸಾಗುವ ಮೂಲಕ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಉದ್ದೇಶಿಸಿದ್ದರು. ಹಲವು ಕಡೆ ರಸ್ತೆ ತಡೆಗಳು ನಡೆದಿದ್ದು, ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಚಾರಕ್ಕೂ ಅಡಚಣೆ ಉಂಟಾಗಿದೆ.

ಅಕ್ಟೋಬರ್ 17ರಂದು ಕಿತ್ತೂರಿನಲ್ಲಿ ರೈತರನ್ನು ಭೇಟಿಯಾಗಿದ್ದ ಮುಖ್ಯಮಂತ್ರಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದರು. ಆದರೆ, ತಮ್ಮ ಪ್ರಮುಖ ಬೇಡಿಕೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.

ಕಬ್ಬು ಅರೆಯುವ ಹಂಗಾಮಿಗೆ ಅಡ್ಡಿ

ಹೊಲಗಳಲ್ಲಿ ಕಬ್ಬು ಪಕ್ವಗೊಂಡಿದ್ದರೂ ಹಂಗಾಮು ಆರಂಭವಾಗದಿರುವುದರಿಂದ ತೂಕ ಮತ್ತು ಸಕ್ಕರೆ ಅಂಶ ಕುಸಿಯುವ ಅಪಾಯವಿದೆ ಎಂದು ಸಿಎಂ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ತೂಕದ ಅಕ್ರಮ ತಡೆಗೆ ಡಿಜಿಟಲ್ ವ್ಯವಸ್ಥೆ, ಕಾರ್ಖಾನೆಗಳ ಪರಿಶೀಲನೆ ಹಾಗೂ ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿ 100 ನೀಡುವ ಕ್ರಮಗಳನ್ನು ಕೈಗೊಂಡಿದೆ. ಇದರಿಂದ ರೈತರಿಗೆ ಸುಮಾರು 290 ಕೋಟಿ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರದ ಮುಂದೆ ಐದು ಬೇಡಿಕೆ

  • 2019ರಿಂದ ಬದಲಾಗದ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪರಿಷ್ಕರಣೆ,
  • ಗೃಹ ಬಳಕೆ ಮತ್ತು ವಾಣಿಜ್ಯ ಸಕ್ಕರೆಗೆ ಪ್ರತ್ಯೇಕ ಬೆಲೆ ನಿಗದಿ,
  • ಕಬ್ಬು ಆಧಾರಿತ ಎಥನಾಲ್ ಖರೀದಿಗೆ ಅವಕಾಶ,
  • ಎಥನಾಲ್ ದರ ಹೆಚ್ಚಳ
  • ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಲೆಕ್ಕಾಚಾರದ ಮೂಲ ಸಕ್ಕರೆ ಚೇತರಿಕೆ ಪ್ರಮಾಣವನ್ನು ಶೇ.9.50ಕ್ಕೆ ಮರುಸ್ಥಾಪಿಸುವಂತೆ ಮುಖ್ಯಮಂತ್ರಿ ಆಗ್ರಹಿಸಿದ್ದಾರೆ.

Must Read