October 19, 2026
Monday, October 19, 2026
spot_img

ಕಬ್ಬಿನ ದರ ಹೆಚ್ಚಳಕ್ಕೆ ತಕ್ಕಂತೆ ಸಕ್ಕರೆ ಬೆಲೆಯೂ ಹೆಚ್ಚಲಿ: ಮುರುಗೇಶ ನಿರಾಣಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಕಬ್ಬು ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ ನೀಡಿದರೆ ನಮಗೆ ಸಹಮತವಿದೆ. ರೈತರು, ಗ್ರಾಹಕರು, ಕಾರ್ಖಾನೆ ಮಾಲೀಕರು, ಬ್ಯಾಂಕ್‌ಗಳಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಕಬ್ಬಿನ ದರದಂತೆ ಸಕ್ಕರೆಯೂ ಹೆಚ್ಚಾಗಬೇಕು ಎಂದು ಮಾಜಿ ಸಚಿವ ಮುರಗೇಶ ನಿರಾಣಿ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿವರ್ಷ ಹೋರಾಟ ಮಾಡುತ್ತಿದ್ದಾರೆ. ಬಿತ್ತನೆ ಕಾರ್ಯಚಟುವಟಿಕೆಗಳ ದರ ಹೆಚ್ಚಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಮಿಟಿ ರಚಿಸಿದ್ದು, ರಾಜ್ಯಕ್ಕೆ ಅವರು ಭೇಟಿ ನೀಡಿ ರೈತ ಮುಖಂಡರ, ಗ್ರಾಹಕರ, ಕಾರ್ಮಿಕ ಮಾಲೀಕರ, ಬ್ಯಾಂಕ್ ಸಿಬ್ಬಂದಿ ಸಲಹೆಗಳ ಪಡೆದು ವರದಿ ತಯಾರಿಸಲಿದೆ ಎಂದರು.
ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಕಬ್ಬು ಬೆಳಯಲಾಗುತ್ತದೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ, ಬಳಿಕ ಕರ್ನಾಟಕವಿದೆ. ರಾಜ್ಯದಲ್ಲಿ 75 ಸಕ್ಕರೆ ಕಾರ್ಖಾನೆಗಳಿವೆ. ಎಲ್ಲರ ಸಾಧಕ ಬಾಧಕಗಳ ಅರಿತು ವರದಿ ತಯಾರಿ ಆಗಲಿದೆ. ಬಳಿಕ ಕೇಂದ್ರ ಸರ್ಕಾರ ನಿರ್ಧಾರ ಮಾಡಲಿದೆ. ಇದು ಒಬ್ಬ ಸಚಿವರು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಸಕ್ಕರೆ ದರ ಹೆಚ್ಚಲು ಅನೇಕ ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೇಂದ್ರದಷ್ಟೇ ರಾಜ್ಯ ಸರ್ಕಾರ ಈ ಬಗ್ಗೆ ಮಹತ್ವದ ಪಾತ್ರ ವಹಿಸಲಿದೆ. ಹಿಂದೆ ಗುರ್ಲಾಪುರದಲ್ಲಿ ಹೋರಾಟ ಮಾಡಿದಾಗ ರಾಜ್ಯ ಸರ್ಕಾರ 15ದಿನದಲ್ಲಿ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ವಿದ್ಯುತ್ ಖರೀದಿ ಮಾಡಲು 15 ಅವಕಾಶ ಪಡೆದಿತ್ತು. ಒಂದು ವರ್ಷದ ಬಳಿಕ ಟೆಂಡರ್ ಕರೆದಿದೆ ಎಂದು ತಿಳಿಸಿದರು.
ಸ್ಟಿಂಗ್ ಸಿಬಿಐ ತನಿಖೆ ನೀಡಲಿ: ಕಾಂಗ್ರೆಸ್‌ನವರು ತಮ್ಮವರ ಸ್ಟಿಂಗ್ ಮಾಡುತ್ತಿರುವುದು ದುರಾದೃಷ್ಟ ಸಂಗತಿ. ಇದು ಸಣ್ಣ ಮಕ್ಕಳಿಗೂ ಗೊತ್ತಾಗುತ್ತಿದೆ. ರಾಜ್ಯದಲ್ಲಿ ಬರಗಾಲವಿದ್ದು, ಅನುದಾನ ನೀಡದ ಸರ್ಕಾರ ಜನರ ತಪ್ಪು ದಾರಿಗೆ ಎಳೆಯಲು ಇಂತಹ ವಿಷಯ ಮುನ್ನೆಲೆಗೆ ತರುತ್ತಿದೆ. ಯಾವ ಪಕ್ಷದವರು ಇದನ್ನು ಮಾಡಿದರು ತಪ್ಪು. ಇದರಿಂದ ರಾಜ್ಯ ಅದೋಗತಿಗೆ ಹೋಗುತ್ತಿದೆ. ತಕ್ಷಣ ಸಿಬಿಐ ತನಿಖೆಗೆ ನೀಡಿ ಸರ್ಕಾರ ಅಭಿವೃದ್ಧಿ ಕಡೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಪಕ್ಷ ಬಿಟ್ಟವರು ಮರಳಿ ಬರಲಿ:
ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೇಟಿ ಆಗಿರುವುದರಲ್ಲಿ ಹೊಸದೇನಿಲ್ಲ. ಮೊದಲನೇದಾಗಿ ಯತ್ನಾಳ ಅವರು ನಮ್ಮ ಪಕ್ಷದವರು. ಈಗ ಉಚ್ಛಾಟಿತರಾಗಿದ್ದಾರೆ. ಅನೇಕ ಬಾರಿ ಪಕ್ಷ ಬಿಟ್ಟು ಹೋಗಿದ್ದಾರೆ. ಯತ್ನಾಳ ಸೇರಿದಂತೆ ಪಕ್ಷದಿಂದ ದೂರ ಆದವರು ಎಲ್ಲರೂ ಮರಳಿ ಪಕ್ಷಕ್ಕೆ ಬರಬೇಕು. ಅಧ್ಯಕ್ಷರು ಅದನ್ನೇ ಮಾಡುತ್ತಿದ್ದು, ಅದು ಅವರ ಜವಾಬ್ದಾರಿ. ರಾಜಕೀಯದಲ್ಲಿ ಯಾರು ಸ್ನೇಹಿತರು ಅಲ್ಲ. ಶಾಶ್ವತ ವೈರಿಗಳಲ್ಲ ಎಂದು ಹೇಳಿದರು.

ಸಂಕನೂರು ಗೆಲವು ನಿಶ್ಚಿತ: ಬಿಜೆಪಿ ಅಭ್ಯರ್ಥಿಯಾಗಿ ಮೂರನೇ ಬಾರಿ ಸ್ಪಽಸಿದ ವಿ.ಎಸ್. ಸಂಕನೂರ ಅವರು ಶಿಕ್ಷಕರ, ಜನರ ಹಾಗೂ ಪದವೀಧರರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಪ್ರಚಾರದ ವೇಳೆ ಅವರ ಬಗ್ಗೆ ಸಕರಾತ್ಮಕವಾಗಿ ಅಭಿಪ್ರಾಯವ್ಯಕ್ತವಾಗಿವೆ. ಮೂರಬೇ ಬಾರಿ ಅವರು ಗೆಲ್ಲುವುದರಲ್ಲಿ ಅನುಮಾನವಿಲ್ಲ. ಮತದಾರರು ಹೆಚ್ಚಿನ ಮತ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ವಿಪ ಸದಸ್ಯಲಿಂಗರಾಜ ಪಾಟೀಲ, ಹು-ಧಾ ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಸೇರಿದಂತೆ ಅನೇಕರಿದ್ದರು.

Must Read