ಹೊಸದಿಗಂತ ವರದಿ ಮಂಗಳೂರು:
ಬೋಳಿಯಾರ್ ಸಮೀಪದ ಕುರ್ನಾಡು ಪಡೀಲ್ ಪೆಟ್ರೋಲ್ ಪಂಪ್ ಬಳಿ ದ್ವಿಚಕ್ರ ವಾಹನವೊಂದಕ್ಕೆ ಹಿಂಬದಿಯಿಂದ ಬಂದ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಸಹಸವಾರನೂ ಸೋಮವಾರ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಕಿನ್ಯ ಅರೆಬಿನಗರದ ಮಹಮ್ಮದ್ ಅಫ್ರಾಝ್ ( 22) ಹಾಗೂ ಕಿನ್ಯ ಉಕ್ಕುಡ ನಿವಾಸಿಯಾದ ಜುನೈದ್ (23) ಮೃತಪಟ್ಟ ಯುವಕರಾಗಿದ್ದಾರೆ.
ಮೃತ ಜುನೈದ್ ಕಲ್ಲಾಪು ಮಾರುಕಟ್ಟೆಯಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅಫ್ರಾಝ್ ಮುಂಬೈ, ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು ಇತ್ತೀಚಿಗೆ ಊರಿಗೆ ಬಂದಿದ್ದ ಎಂದು ತಿಳಿದು ಬಂದಿದೆ.
ಡಿಕ್ಕಿಯ ರಭಸಕ್ಕೆ ತುಂಡಾಗಿ ಬಿದ್ದ ವಿದ್ಯುತ್ ಕಂಬ !
ಈ ಇಬ್ಬರು ಸೋಮವಾರ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಸ್ಕೂಟರ್ನಲ್ಲಿ ಚೇಳೂರಿನಿಂದ ನಾಟಕಲ್ ನತ್ತ ತೆರಳುತ್ತಿದ್ದರು. ಬೋಳಿಯಾರ್ ದಾಟಿ ಪಡೀಲ್ ಪೆಟ್ರೋಲ್ ಬಂಕ್ ಬಳಿ ತಲುಪಿದಾಗ ಹಿಂದಿನಿಂದ ಅತಿಯಾದ ವೇಗದಿಂದ ಬಂದ ಪಿಕಪ್ ಸ್ಕೂಟರ್ಗೆ ಡಿಕ್ಕಿ ಹೊಡೆದ ಬಳಿಕ ನಿಯಂತ್ರಣ ಕಳೆದುಕೊಂಡ ಪಿಕಪ್ ಬಲಭಾಗಕ್ಕೆ ತಿರುಗಿ ರಸ್ತೆಯ ಇನ್ನೊಂದು ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಈ ಸಂದರ್ಭದಲ್ಲಿ ಅಫ್ರಾಝ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡ ಜುನೈದ್ ನನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತನೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಬಳಿಕ ಪಿಕಪ್ ಚಾಲಕ ಪರಾರಿಯಾಗಿದ್ದಾನೆ. ಅಪಘಾತದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅನುಮಾನದ ಸಂದೇಶಗಳು ಹರಿದಾಡುತ್ತಿವೆ.



