October 19, 2026
Monday, October 19, 2026
spot_img

WPL ಹರಾಜಿನಲ್ಲಿ ಯಾರಿಗೆ ಜಾಕ್‌ಪಾಟ್?: 146 ಆಟಗಾರ್ತಿಯರ ಮೇಲೆ ಫ್ರಾಂಚೈಸಿಗಳ ಕಣ್ಣು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಪ್ರೀಮಿಯರ್ ಲೀಗ್‌ (WPL) 2027ರ ಆಟಗಾರ್ತಿಯರ ಹರಾಜು ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ನಡೆಯಲಿದೆ.

ಈ ಬಾರಿ ಹರಾಜಿನ ಪಟ್ಟಿಯಲ್ಲಿ 146 ಆಟಗಾರ್ತಿಯರು ಸ್ಥಾನ ಪಡೆದಿದ್ದು, ಫ್ರಾಂಚೈಸಿಗಳ ಬಳಿ ಲಭ್ಯವಿರುವುದು ಕೇವಲ 27 ಸ್ಥಾನಗಳು ಮಾತ್ರ. ಹೀಗಾಗಿ ಭಾರತದ ಯುವ ಪ್ರತಿಭೆಗಳು, ಅನುಭವಿ ಆಟಗಾರ್ತಿಯರು ಹಾಗೂ ವಿದೇಶಿ ತಾರೆಯರ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.

ಭಾರತೀಯ ಆಟಗಾರ್ತಿಯರೇ ಹೆಚ್ಚು

ಹರಾಜಿನ ಪಟ್ಟಿಯಲ್ಲಿ 119 ಭಾರತೀಯ ಆಟಗಾರ್ತಿಯರಿದ್ದಾರೆ. ಇವರಲ್ಲಿ 22 ಮಂದಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದವರಾಗಿದ್ದು, 97 ಮಂದಿ ಅನ್‌ಕ್ಯಾಪ್ಡ್ ಆಟಗಾರ್ತಿಯರಾಗಿದ್ದಾರೆ. ದೇಶೀಯ ಆಟಗಾರ್ತಿಯರಿಗಾಗಿ ಕೇವಲ 20 ಸ್ಥಾನಗಳು ಲಭ್ಯವಿವೆ. ವಿದೇಶಿ ಆಟಗಾರ್ತಿಯರ ವಿಭಾಗದಲ್ಲಿ 27 ಮಂದಿ ಇದ್ದು, ಅವರಲ್ಲಿ ಆರು ಮಂದಿ ಅಸೋಸಿಯೇಟ್ ರಾಷ್ಟ್ರಗಳಿಗೆ ಸೇರಿದವರು. ವಿದೇಶಿ ಆಟಗಾರ್ತಿಯರಿಗೆ ಏಳು ಸ್ಥಾನಗಳು ಮೀಸಲಾಗಿವೆ.

50 ಲಕ್ಷ ಮೂಲ ಬೆಲೆಯ ಇಬ್ಬರು ತಾರೆಯರು

ಹರಾಜಿನಲ್ಲಿ ಗರಿಷ್ಠ ಮೂಲ ಬೆಲೆ 50 ಲಕ್ಷ ನಿಗದಿಯಾಗಿದ್ದು, ಇಂಗ್ಲೆಂಡ್‌ನ ಸೋಫಿಯಾ ಡಂಕ್ಲಿ ಮತ್ತು ಆಸ್ಟ್ರೇಲಿಯಾದ ಸೋಫಿ ಮೊಲಿನ್ಯೂಕ್ಸ್ ಈ ಬೆಲೆ ವಿಭಾಗದಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದಿಂದ ಬಿಡುಗಡೆಯಾಗಿರುವ ಭಾರತದ ಜಿ. ಕಮಲಿನಿ 40 ಲಕ್ಷ ಮೂಲ ಬೆಲೆಯೊಂದಿಗೆ ಹರಾಜಿಗೆ ಪ್ರವೇಶಿಸಿದ್ದಾರೆ. ಕಿರಣ್ ನವಗಿರೆ, ಆಸ್ಟ್ರೇಲಿಯಾದ ಹೀದರ್ ಗ್ರಹಾಂ ಮತ್ತು ಜೆಸ್ ಜೊನಾಸೆನ್ ಕೂಡ ಇದೇ ಬೆಲೆ ವಿಭಾಗದಲ್ಲಿದ್ದಾರೆ. ಭಾರತದ ಸ್ನೇಹ್ ರಾಣಾ ಹಾಗೂ ಶ್ರೀಲಂಕಾ ನಾಯಕಿ ಚಮರಿ ಅತಪತ್ತು ಸೇರಿದಂತೆ 30 ಆಟಗಾರ್ತಿಯರು 30 ಲಕ್ಷ ಮೂಲ ಬೆಲೆಗೆ ನೋಂದಾಯಿಸಿಕೊಂಡಿದ್ದಾರೆ. ಉಳಿದ ಬಹುತೇಕ ಆಟಗಾರ್ತಿಯರ ಮೂಲ ಬೆಲೆ 10 ಲಕ್ಷವಾಗಿದೆ.

ಯುಪಿ ವಾರಿಯರ್ಸ್ ಬಳಿ ಅತಿ ದೊಡ್ಡ ಮೊತ್ತ

ಹರಾಜಿನಲ್ಲಿ ಯುಪಿ ವಾರಿಯರ್ಸ್ ತಂಡ ಹೆಚ್ಚು ಆಟಗಾರ್ತಿಯರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ತಂಡವು ಒಂಬತ್ತು ಆಟಗಾರ್ತಿಯರನ್ನು ಬಿಡುಗಡೆ ಮಾಡಿದ್ದು, ತಾರಾ ನಾರಿಸ್ ಅವರನ್ನು 10 ಲಕ್ಷಕ್ಕೆ ಮುಂಬೈ ಇಂಡಿಯನ್ಸ್‌ಗೆ ವರ್ಗಾಯಿಸಿದೆ. ಹರಾಜಿಗೆ ತಂಡದ ಬಳಿ 3.75 ಕೋಟಿ ಮೊತ್ತ ಲಭ್ಯವಿದ್ದು, ತುಂಬಬೇಕಾದ ಸ್ಥಾನಗಳ ಸಂಖ್ಯೆಯೂ ಅತಿ ಹೆಚ್ಚಾಗಿದೆ.

Must Read