ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಶತಮಾನೋತ್ಸವ ವರ್ಷದ ವಿಜಯದಶಮಿ ಉತ್ಸವದಲ್ಲಿ ಆರೆಸ್ಸೆಸ್ ಸರಸಂಘಚಾಲಕ್ ಡಾ.ಮೋಹನ್ ಭಾಗವತ್ ಅವರು ಮಾಡಿದ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ರಾಷ್ಟ್ರೀಯ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ, ಸ್ವಾವಲಂಬನೆ ಮತ್ತು ರಾಷ್ಟ್ರ ನಿರ್ಮಾಣದ ಕುರಿತು ಭಾಗವತ್ ನೀಡಿದ ಸಂದೇಶಗಳು ಪ್ರೇರಣಾದಾಯಕವಾಗಿವೆ ಎಂದು ಮೋದಿ ತಿಳಿಸಿದ್ದಾರೆ.
ಮಂಗಳವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ, ಭಾಗವತ್ ತಮ್ಮ ಭಾಷಣದಲ್ಲಿ ಸಮಾಜವನ್ನು ಬಲಪಡಿಸುವುದು ಮತ್ತು ಸ್ವಾವಲಂಬನೆಯ ಮನೋಭಾವ ಬೆಳೆಸುವ ಅಗತ್ಯದ ಬಗ್ಗೆ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಿದ್ದಾರೆ.
ಸಂಘದ ಸ್ವಯಂಸೇವಕರಲ್ಲಿ ಸೇವಾ ಮನೋಭಾವ ಮತ್ತು ದೇಶ ನಿರ್ಮಾಣದ ಬದ್ಧತೆಯನ್ನು ಬೆಳೆಸುವ ವಿಚಾರಕ್ಕೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಉದ್ದೇಶಿಸಿರುವ ‘ಪಂಚ ಪರಿವರ್ತನ’ದ ಮಹತ್ವವನ್ನು ಭಾಗವತ್ ವಿವರಿಸಿರುವುದನ್ನೂ ಮೋದಿ ಉಲ್ಲೇಖಿಸಿದ್ದಾರೆ. ಈ ವಿಚಾರಗಳು ಸಮಾಜದ ಅಭಿವೃದ್ಧಿಗೆ ಅರ್ಥಪೂರ್ಣ ಕೊಡುಗೆ ನೀಡಬಲ್ಲವು ಎಂಬ ಅಭಿಪ್ರಾಯವನ್ನು ಅವರು ಹಂಚಿಕೊಂಡಿದ್ದಾರೆ.
ನಾಗ್ಪುರದ ರೇಶಿಂಬಾಗ್ ಮೈದಾನದಲ್ಲಿ ಆರೆಸ್ಸೆಸ್ ನ ಶತಮಾನೋತ್ಸವ ವಿಜಯದಶಮಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಘದ ನೂರು ವರ್ಷಗಳ ಪಯಣವನ್ನು ಸ್ಮರಿಸುವ ವರ್ಷಪೂರ್ತಿ ಕಾರ್ಯಕ್ರಮಗಳ ಸಮಾರೋಪದ ಭಾಗವಾಗಿ ಈ ಸಮಾರಂಭ ನಡೆದಿತ್ತು.
ಡಾ.ಮೋಹನ್ ಭಾಗವತ್ ಹೇಳಿದ್ದೇನು?
ಸಭೆಯನ್ನುದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ಸಂತ ರವಿದಾಸ್, ಸ್ವಾಮಿ ಶ್ರದ್ಧಾನಂದ ಮತ್ತು ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರ ಕೊಡುಗೆಗಳನ್ನು ಸ್ಮರಿಸಿದರು. ಆಧ್ಯಾತ್ಮಿಕ ಚಿಂತನೆ, ಸಾಮಾಜಿಕ ಸಾಮರಸ್ಯ ಮತ್ತು ಧಾರ್ಮಿಕ ಮೌಲ್ಯಗಳ ಸಂರಕ್ಷಣೆಯಲ್ಲಿ ಅವರ ಪಾತ್ರವನ್ನು ಪ್ರಸ್ತಾಪಿಸಿದರು. ಕಳೆದ ನೂರು ವರ್ಷಗಳಿಂದ ಸಂಘವು ದೇಶದ ಏಕತೆ, ರಾಷ್ಟ್ರೀಯ ಗುರುತು ಮತ್ತು ಸ್ವಾಭಿಮಾನವನ್ನು ಬಲಪಡಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಏನಿದು ಪಂಚ ಪರಿವರ್ತನ?
- ಸ್ವದೇಶಿ ಮತ್ತು ಸ್ವಾವಲಂಬನೆ: ಸ್ಥಳೀಯ ಉತ್ಪನ್ನಗಳ ಬಳಕೆಗೆ ಆದ್ಯತೆ ನೀಡುವ ಮೂಲಕ ದೇಶೀಯ ಉದ್ಯಮಗಳಿಗೆ ಉತ್ತೇಜನ ನೀಡಿ, ಆರ್ಥಿಕ ಸ್ವಾವಲಂಬನೆಯನ್ನು ಬಲಪಡಿಸುವುದು.
- ಸಾಮಾಜಿಕ ಸಾಮರಸ್ಯ: ಜಾತಿ ಆಧಾರಿತ ತಾರತಮ್ಯವನ್ನು ನಿವಾರಿಸಿ, ಸಮಾಜದ ಎಲ್ಲ ವರ್ಗಗಳ ನಡುವೆ ಸಮಾನತೆ, ಸಹಬಾಳ್ವೆ ಮತ್ತು ಒಗ್ಗಟ್ಟನ್ನು ಬೆಳೆಸುವುದು.
- ನಾಗರಿಕ ಕರ್ತವ್ಯ: ಸಂವಿಧಾನ ಮತ್ತು ಕಾನೂನಿಗೆ ಗೌರವ ನೀಡುವುದು, ಸಾರ್ವಜನಿಕ ಶಿಸ್ತನ್ನು ಪಾಲಿಸುವುದು ಹಾಗೂ ಜವಾಬ್ದಾರಿಯುತ ನಾಗರಿಕರಾಗಿ ಕರ್ತವ್ಯ ನಿರ್ವಹಿಸುವುದು.
- ಪರಿಸರ ಸಂರಕ್ಷಣೆ: ಗಿಡಗಳನ್ನು ನೆಡುವುದು, ನೀರನ್ನು ಮಿತವಾಗಿ ಬಳಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಸೇರಿದಂತೆ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು.
- ಕುಟುಂಬ ಪ್ರಬೋಧನ: ಕುಟುಂಬ ವ್ಯವಸ್ಥೆಯನ್ನು ಬಲಪಡಿಸಿ, ಭಾರತೀಯ ಸಂಸ್ಕೃತಿ, ಸಂಸ್ಕಾರ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು.



