ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೊಮ್ಮೆ ಡೆಲಿವರಿ ಮಾಡಲು ಬರುವ ಯುವಕರು ಅನುಚಿತವಾಗಿ ವರ್ತಿಸುತ್ತಾರೆ, ಕಿರಿಕಿರಿ ಮಾಡುತ್ತಾರೆ. ಈ ಕಾರಣಗಳಿಂದ ಡೆಲಿವರಿ ಮಾಡುವವರಿಗೆ ಒಂದು ಲೋಟ ನೀರು ಕೊಡೋದಕ್ಕೂ ಜನ ಹಿಂದು ಮುಂದು ನೋಡುತ್ತಾರೆ. ಆದರೆ ಇಲ್ಲೊಬ್ಬ ಡೆಲಿವರಿ ಪರ್ಸನ್ ಬೆಂಕಿಯಿಂದ ಮಹಿಳೆಯೊಬ್ಬರ ಮನೆಯನ್ನು, ಪ್ರಾಣವನ್ನು ಉಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ವೈರಲ್ ಆಗಿವೆ.
ಎಂದಿನಂತೆ ಡೆಲಿವರಿ ಮಾಡುವ ವ್ಯಕ್ತಿಯೊಬ್ಬರು ಪಾರ್ಸಲ್ ನೀಡಲು ಆಗಮಿಸುತ್ತಾರೆ. ಪಾರ್ಸಲ್ ನೀಡಿದ ನಂತರ ಒಟಿಪಿ ಕೇಳಿ ಪಡೆಯುತ್ತಾರೆ. ಅಷ್ಟರೊಳಗೆ ಮಹಿಳೆ ಅಡುಗೆಗೆ ಇಟ್ಟಿರುವ ಬಾಣಲೆಯಲ್ಲಿ ಬೆಂಕಿ ಕಾಣಿಸುತ್ತದೆ. ಮಹಿಳೆಗೆ ಇದರ ಅರಿವು ಇರುವುದಿಲ್ಲ. ಆಕೆ ತನ್ನ ಪಾಡಿಗೆ ಪಾರ್ಸಲ್ ಪಡೆಯುವುದರಲ್ಲಿ ನಿರತಳಾಗಿರುತ್ತಾಳೆ.
https://www.instagram.com/reel/DesAJqxI5dC/?mdxt=MXU0eHpydWVyMHp4bQ%3D%3D
ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಮನೆಯಲ್ಲಿ ಹೊಗೆ ಆವರಿಸಿದ್ದನ್ನು ಕಂಡು ಮಹಿಳೆ ಅಡುಗೆ ಮನೆಗೆ ಹೋಗುತ್ತಾರೆ. ಈ ವೇಳೆ ಬಾಣಲೆಯಿಂದ ಬೆಂಕಿ ಹೊತ್ತಿ ಉರಿಯುತ್ತಿರುತ್ತದೆ. ಆಕೆ ನೀರನ್ನು ಎಸೆಯುತ್ತಿದ್ದಂತೆಯೇ ಬೆಂಕಿ ಇನ್ನಷ್ಟು ಎತ್ತರಕ್ಕೆ ಚಿಮ್ಮುತ್ತದೆ.
ಆಕೆ ಏನು ಮಾಡಬೇಕು ಅರ್ಥವಾಗದೇ ಪ್ಯಾನಿಕ್ ಆಗಿ ಕೂಗಾಡುತ್ತಾರೆ. ಬಾಗಿಲ ಬಳಿಯೇ ಇದ್ದ ಪಾರ್ಸಲ್ ನೀಡಲು ಬಂದಿದ್ದ ವ್ಯಕ್ತಿ ತಡಮಾಡದೇ ಒಳಕ್ಕೆ ಬಂದು, ಸ್ವಲ್ಪವೂ ಪ್ಯಾನಿಕ್ ಆಗದೇ ಅಲ್ಲೇ ಇದ್ದ ಮಸಿಬಟ್ಟೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಅದ್ದಿಕೊಳ್ಳುತ್ತಾರೆ. ನಂತರ ಬಾಣಲೆಯ ಮೇಲೆ ಒದ್ದೆ ಬಟ್ಟೆ ಹಾಕುತ್ತಾರೆ. ಒಂದೆರಡು ಬಾರಿ ಹೀಗೆ ಮಾಡುವುದರಲ್ಲಿ ಬೆಂಕಿ ಆರಿಹೋಗಿದೆ. ನಂತರ ಮಹಿಳೆ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಒಳ್ಳೆಯ ಡೆಲಿವರಿ ಬಾಯ್‌ಗಳು ಇನ್ನೂ ಇದ್ದಾರೆ ಎಂದು ಹೇಳಿದ್ದಾರೆ.



