October 20, 2026
Tuesday, October 20, 2026
spot_img

ಬೆಂಗಳೂರು–ಮುಂಬೈಗೆ ವಂದೇ ಭಾರತ್ ಸ್ಲೀಪರ್ ರೈಲು: 24 ಗಂಟೆಯ ಪ್ರಯಾಣ ಇನ್ಮುಂದೆ 16 ಗಂಟೆಗಳಲ್ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲಿನ ಉದ್ಘಾಟನಾ ವಿಶೇಷ ಸೇವೆ ಆರಂಭಿಸುವ ನಿರೀಕ್ಷೆಯಿದೆ.

ಹೌದು! ನೈರುತ್ಯ ರೈಲ್ವೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಈ ರೈಲು ಎರಡು ಪ್ರಮುಖ ವಾಣಿಜ್ಯ ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಸುಮಾರು 16 ಗಂಟೆಗಳಿಗೆ ಇಳಿಸುವ ಉದ್ದೇಶ ಹೊಂದಿದೆ. ಆದರೆ ನಿಯಮಿತ ಸಂಚಾರದ ವೇಳಾಪಟ್ಟಿ ಮತ್ತು ಅಂತಿಮ ಕಾರ್ಯಾಚರಣೆಯ ವಿವರಗಳನ್ನು ರೈಲ್ವೆ ಇಲಾಖೆ ಇನ್ನೂ ಅಧಿಕೃತವಾಗಿ ಪ್ರಕಟಿಸಬೇಕಿದೆ.

ಯಾವಾಗ ಹೊರಟು ಎಷ್ಟೊತ್ತಿಗೆ ತಲುಪೋದು?

ಪ್ರಸ್ತಾವಿತ ಯೋಜನೆಯಂತೆ, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ರಾತ್ರಿ 8.10ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 11.55ಕ್ಕೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 7.50ಕ್ಕೆ ಹೊರಟು ಮರುದಿನ ಬೆಳಗ್ಗೆ 11.55ಕ್ಕೆ ಮುಂಬೈ ತಲುಪುವ ವೇಳಾಪಟ್ಟಿಯನ್ನೂ ರೂಪಿಸಲಾಗಿದೆ. ಈ ಸೇವೆ ಪ್ರತಿದಿನ ಕಾರ್ಯನಿರ್ವಹಿಸುವ ನಿರೀಕ್ಷೆಯಿದ್ದು, ಉದ್ಘಾಟನಾ ರೈಲಿಗೆ 27651/652 ಸಂಖ್ಯೆಯನ್ನು ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:

ಎಲ್ಲೆಲ್ಲಾ ನಿಲುಗಡೆ

16 ಬೋಗಿಗಳ ರೈಲು ಧರ್ಮಾವರಂ, ಅನಂತಪುರ, ಗುಂತಕಲ್, ರಾಯಚೂರು, ವಾಡಿ, ಕಲಬುರಗಿ, ಸೋಲಾಪುರ, ಪುಣೆ ಮತ್ತು ಕಲ್ಯಾಣ್ ನಿಲ್ದಾಣಗಳಲ್ಲಿ ನಿಲುಗಡೆ ಪಡೆಯುವ ಸಾಧ್ಯತೆಯಿದೆ. ಈ ಮಾರ್ಗ ಮತ್ತು ನಿಲುಗಡೆಗಳ ಅಂತಿಮ ದೃಢೀಕರಣ ಇನ್ನೂ ಬಾಕಿಯಿದೆ.

ಪ್ರಸ್ತುತ ಬೆಂಗಳೂರು–ಮುಂಬೈ ನಡುವೆ ಸಂಚರಿಸುವ ಉದ್ಯಾನ್ ಎಕ್ಸ್‌ಪ್ರೆಸ್ ಪ್ರಯಾಣಕ್ಕೆ ಸುಮಾರು 24 ಗಂಟೆ ತೆಗೆದುಕೊಳ್ಳುತ್ತದೆ. ಹೊಸ ವಂದೇ ಭಾರತ್ ಸ್ಲೀಪರ್ ಸೇವೆ ಜಾರಿಗೆ ಬಂದರೆ ಸುಮಾರು ಎಂಟು ಗಂಟೆಗಳಷ್ಟು ಸಮಯ ಉಳಿತಾಯವಾಗಬಹುದು. ಇದರಿಂದ ಉದ್ಯೋಗ, ವ್ಯಾಪಾರ ಮತ್ತು ವೈಯಕ್ತಿಕ ಕಾರಣಗಳಿಗಾಗಿ ಎರಡೂ ನಗರಗಳ ನಡುವೆ ಪ್ರಯಾಣಿಸುವವರಿಗೆ ಅನುಕೂಲವಾಗುವ ನಿರೀಕ್ಷೆಯಿದೆ.

ಆದರೆ ಬೆಂಗಳೂರಿನ ಯಾವ ನಿಲ್ದಾಣದಿಂದ ನಿಯಮಿತ ಸೇವೆ ಆರಂಭವಾಗಲಿದೆ ಎಂಬುದು ಚರ್ಚೆಗೆ ಕಾರಣವಾಗಿದೆ. ರೈಲು ಕೆಎಸ್‌ಆರ್ ಬೆಂಗಳೂರು ಅಥವಾ ಕನಿಷ್ಠ ಯಶವಂತಪುರದಿಂದಲಾದರೂ ಸಂಚರಿಸಬೇಕು ಎನ್ನುವುದು ಕೆಲ ಪ್ರಯಾಣಿಕರ ಅಭಿಪ್ರಾಯ.

Must Read