October 21, 2026
Wednesday, October 21, 2026
spot_img

ಜಟ್ಟಿಕಾಳಗ, ಶಮಿ ವೃಕ್ಷಕ್ಕೆ ಪೂಜೆ: ಮೈಸೂರು ಅರಮನೆಯಲ್ಲಿ ವಿಜಯದಶಮಿ ಆಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯಾದ್ಯಂತ ವಿಜಯದಶಮಿ ಸಂಭ್ರಮ ಮನೆಮಾಡಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಭ್ರಮ ಮನೆಮಾಡಿದೆ. ಇಂದು ಬೆಳಗ್ಗೆಯಿಂದಲೇ ಅರಮನೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿವೆ. ಇಂದು ಸಂಜೆ 4:10ರಿಂದ 4:35ರ ಮೀನ ಲಗ್ನದ ಶುಭ ಮುಹೂರ್ತದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ಉತ್ಸವಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಶುಭಾರಂಭಗೊಳ್ಳಲಿದೆ.

ಇಂದು ಬೆಳಗ್ಗೆ 8:00 ಗಂಟೆಗೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳು ಆಗಮಿಸಿವೆ. ಬಳಿಕ ರಾಜ ವಂಶಸ್ಥರು ಕಲ್ಯಾಣಿ ತೊಟ್ಟಿಯಲ್ಲಿ ನಡೆಯುವ ಜಟ್ಟಿಕಾಳಗಕ್ಕೆ ಸೂಚನೆ ನೀಡಲಿದ್ದಾರೆ. ನಂತರ 9:30ರಿಂದ 10:10ರವರೆಗೆ ವಿಜಯಯಾತ್ರೆ ನಡೆಯಲಿದೆ. ತದನಂತರ ಅರಮನೆ ಮುಂಭಾಗದ ಭುವನೇಶ್ವರ ದೇಗುಲದ ಒಳಗಿನ ಬನ್ನಿ ಮರಕ್ಕೆ ಪೂಜೆ ನಡೆಯಲಿದೆ. ಇದಾದ ನಂತರ ರಾಜ ವಂಶಸ್ಥರು ಅರಮನೆಗೆ ವಾಪಾಸಾಗುತ್ತಾರೆ.

ಮೈಸೂರು ನಗರದಲ್ಲಿ ಪೊಲೀಸರು ಆಯಕಟ್ಟಿನ ಸ್ಥಳಗಳಲ್ಲಿ ಸರ್ಕಲ್​ಗಳಲ್ಲಿ ಹಾಗೂ ಜಂಬೂ ಸವಾರಿ ಸಾಗುವ ಮಾರ್ಗ ಸೇರಿದಂತೆ ನಗರದ ಹಲವು ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರದಲ್ಲಿ 5,000ಕ್ಕೂ ಹೆಚ್ಚು ಪೊಲೀಸರು, 33 ಕೆಎಸ್​ಆರ್​ಪಿ, ಸಿಎಆರ್​, ಡಿಎಆರ್​ ತುಕಡಿಗಳನ್ನು ನಿಯೋಜಿಸಲಾಗಿದೆ. ಮೆರವಣಿಗೆ ಸಾಗುವ ದಾರಿಯ ಉದ್ದಕ್ಕೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

Must Read