ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ವಿಜಯದಶಮಿ ಸಂಭ್ರಮ ಮನೆಮಾಡಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಭ್ರಮ ಮನೆಮಾಡಿದೆ. ಇಂದು ಬೆಳಗ್ಗೆಯಿಂದಲೇ ಅರಮನೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿವೆ. ಇಂದು ಸಂಜೆ 4:10ರಿಂದ 4:35ರ ಮೀನ ಲಗ್ನದ ಶುಭ ಮುಹೂರ್ತದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ಉತ್ಸವಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಶುಭಾರಂಭಗೊಳ್ಳಲಿದೆ.
ಇಂದು ಬೆಳಗ್ಗೆ 8:00 ಗಂಟೆಗೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳು ಆಗಮಿಸಿವೆ. ಬಳಿಕ ರಾಜ ವಂಶಸ್ಥರು ಕಲ್ಯಾಣಿ ತೊಟ್ಟಿಯಲ್ಲಿ ನಡೆಯುವ ಜಟ್ಟಿಕಾಳಗಕ್ಕೆ ಸೂಚನೆ ನೀಡಲಿದ್ದಾರೆ. ನಂತರ 9:30ರಿಂದ 10:10ರವರೆಗೆ ವಿಜಯಯಾತ್ರೆ ನಡೆಯಲಿದೆ. ತದನಂತರ ಅರಮನೆ ಮುಂಭಾಗದ ಭುವನೇಶ್ವರ ದೇಗುಲದ ಒಳಗಿನ ಬನ್ನಿ ಮರಕ್ಕೆ ಪೂಜೆ ನಡೆಯಲಿದೆ. ಇದಾದ ನಂತರ ರಾಜ ವಂಶಸ್ಥರು ಅರಮನೆಗೆ ವಾಪಾಸಾಗುತ್ತಾರೆ.
ಮೈಸೂರು ನಗರದಲ್ಲಿ ಪೊಲೀಸರು ಆಯಕಟ್ಟಿನ ಸ್ಥಳಗಳಲ್ಲಿ ಸರ್ಕಲ್ಗಳಲ್ಲಿ ಹಾಗೂ ಜಂಬೂ ಸವಾರಿ ಸಾಗುವ ಮಾರ್ಗ ಸೇರಿದಂತೆ ನಗರದ ಹಲವು ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರದಲ್ಲಿ 5,000ಕ್ಕೂ ಹೆಚ್ಚು ಪೊಲೀಸರು, 33 ಕೆಎಸ್ಆರ್ಪಿ, ಸಿಎಆರ್, ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಮೆರವಣಿಗೆ ಸಾಗುವ ದಾರಿಯ ಉದ್ದಕ್ಕೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.



